ಬೀಜಿಂಗ್: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ 'ಆನರ್' ಅಭಿವೃದ್ಧಿಪಡಿಸಿದ ಮಾನವರನ್ನು ಹೋಲುವ ರೊಬೊಟ್ (ಹ್ಯೂಮನಾಯ್ಡ್ ರೊಬೊಟ್) 100 ಮೀಟರ್ ಓಟವನ್ನು 9.32 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದೆ. ಇದರೊಂದಿಗೆ ಜಮೈಕಾದ ದಿಗ್ಗಜ ಅಥ್ಲೀಟ್ ಉಸೇನ್ ಬೋಲ್ಟ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದೆ.
'ಲೈಟ್ನಿಂಗ್' ಎಂದು ಕರೆಯಲ್ಪಡುವ ಈ ರೊಬೊಟ್, ಬೀಜಿಂಗ್‌ನಲ್ಲಿ ಚಾಲನೆ ಪಡೆದ ಎರಡನೇ 'ವರ್ಲ್ಡ್ ಹ್ಯೂಮನಾಯ್ಡ್ ರೊಬೊಟ್ ಗೇಮ್ಸ್'ನ ಪೂರ್ವಭಾವಿ ತರಬೇತಿ ಸ್ಪರ್ಧೆಯಲ್ಲಿ ಸೆಕೆಂಡಿಗೆ ಗರಿಷ್ಠ 14.5 ಮೀಟರ್ ವೇಗವನ್ನು ಕ್ರಮಿಸಿದೆ ಎಂದು ಚೀನಾದ ಸರ್ಕಾರಿ ವಾಹಿನಿ ವರದಿ ಮಾಡಿದೆ.
2009ರಲ್ಲಿ ಬರ್ಲಿನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೋಲ್ಟ್ ಅವರು ನಿರ್ಮಿಸಿದ್ದ 9.58 ಸೆಕೆಂಡುಗಳ 100 ಮೀಟರ್ ವಿಶ್ವ ದಾಖಲೆಯನ್ನು ಈ ರೊಬೊಟ್ ಹಿಂದಿಕ್ಕಿದೆ ಎನ್ನಲಾಗಿದೆ.
ಚೀನಾ ಹುಮನಾಯ್ಡ್ ರೊಬೊಟ್‌ಗಳನ್ನು ಕಾರ್ಯತಂತ್ರದ ಉದಯೋನ್ಮುಖ ಉದ್ಯಮವಾಗಿ ಉತ್ತೇಜಿಸುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ಹಾಗೂ ಹಾರ್ಡ್‌ವೇರ್ ಕ್ಷೇತ್ರದ ಪ್ರಗತಿಯು ಉತ್ಪಾದನೆ, ಲಾಜಿಸ್ಟಿಕ್ಸ್ ಹಾಗೂ ಗ್ರಾಹಕ ಸೇವಾ ವಲಯಗಳಲ್ಲಿ ರೊಬೊಟ್‌ಗಳ ಬಳಕೆ ಪ್ರಮುಖ ಪಾತ್ರವಹಿಸಿವೆ ಎಂಬುದು ನೀತಿ ನಿರೂಪಕರು ಮತ್ತು ವಿವಿಧ ಕಂಪನಿಗಳು ಅಭಿಪ್ರಾಯಪಟ್ಟಿವೆ.
ಏಪ್ರಿಲ್‌ನಲ್ಲಿ ಲೈಟ್ನಿಂಗ್ ರೊಬೊಟ್ 21 ಕಿ.ಮೀ. ಬೀಜಿಂಗ್ ಹಾಫ್ ಮ್ಯಾರಥಾನ್ ಅನ್ನು 50 ನಿಮಿಷ ಮತ್ತು 26 ಸೆಕೆಂಡುಗಳಲ್ಲಿ ಗೆದ್ದಿತು. ಇದು ಖ್ಯಾತ ಅಥ್ಲೀಟ್‌ಗಳ ವಿಶ್ವ ದಾಖಲೆಯ ವೇಗವನ್ನು ಮೀರಿದ್ದಾಗಿತ್ತು.
ಹಾಫ್ ಮ್ಯಾರಥಾನ್ ಸಂದರ್ಭದಲ್ಲಿ ಈ ರೊಬೊಟ್ 169 ಸೆಂ.ಮೀ ಎತ್ತರವಿತ್ತು. 95 ಸೆಂ.ಮೀ ಉದ್ದದ ಕಾಲುಗಳನ್ನು ಹೊಂದಿತ್ತು. ವರ್ಲ್ಡ್ ಹ್ಯೂಮನಾಯ್ಡ್ ರೊಬೊಟ್ ಗೇಮ್ಸ್‌ಗೆ ಮುಂಚಿತವಾಗಿ ಸಂಶೋಧಕರು ಇದರ ಕಾಲುಗಳನ್ನು 10 ಸೆಂ.ಮೀ ಹೆಚ್ಚಿಸಿ, ಒಟ್ಟು 1.05 ಮೀಟರ್‌ಗೆ ವಿಸ್ತರಿಸಿದ್ದಾರೆ ಎಂದು ವರದಿಯಾಗಿದೆ.

