ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಫ್ತಿಯ ತೃಕರಿಪುರ ಬೀರಿಚ್ಚೇರಿ ಎಂಬಲ್ಲಿ ಮನೆಯಲ್ಲಿ ಆಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡು ವಿವಿಧ ಸಾಮಗ್ರಿ ಉರಿದು ನಾಶಗೊಂಡು ಅಪಾರ ಹಾನಿ ಸಂಭವಿಸಿದೆ. ಸ್ಪೋಟದ ಶಬ್ದ ಕೇಳಿ ಮನೆಯಲ್ಲಿದ್ದವರು ಹೊರಗೆ ಓಡಿ ಪರಾರಿಯಾಗಿರುವುದರಿಂದ ಜೀವಾಪಾಯ ತಪ್ಪಿದೆ.
ಮಂಗಳವಾರ ಸಂಜೆ ಬೀರಿಚ್ಚೇರಿ ಕುಳೇರಿ ನಿವಾಸಿ ಕೆ.ಪಿ. ನಿಸಾರ್ ಎಂಬವರ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಆಹಾರ ತಯಾರಿಸುತ್ತಿದ್ದಾಗ ಸಿಲಿಂಡರ್ ನಿಂದ ಅನಿಲ ಸೋರಿಕೆ ಉಂಟಾಗಿದ್ದು ಅಲ್ಪ ಹೊತ್ತಿನಲ್ಲೇ ಸ್ಪೋಟಗೊಂಡಿದೆ. ಇದರಿಂದ ಬೆಂಕಿ ಹತ್ತಿಕೊಂಡಿದೆ. ಮನೆಯೊಳಗೆ ಎರಡು ತಿಂಗಳು ಪ್ರಾಯದ ಮಗು ಸಹಿತ ನಾಲ್ಕು ಮಂದಿ ಇದ್ದರು. ಮಗುವನ್ನು ಎತ್ತಿಕೊಂಡು ಎಲ್ಲರೂ ಹೊರಗೆ ಓಡಿದ್ದಾರೆ. ತಕ್ಷಣ ತ್ರಿಕ್ಕರಿಪುರದಿಂದ ಅಗ್ನಿಶಾಮಕ ದಳ ತಲುಪಿ ಬೆಂಕಿ ಶಮನಗೊಳಿಸಿದೆ. ದುರ್ಘಟನೆಯಿಂದ ಎರಡಂತಸ್ತಿನ ಮನೆಯ ಅಡುಗೆ ಕೋಣೆ ಪೂರ್ಣವಾಗಿ ಉರಿದಿದ್ದು ಫ್ರಿಡ್ಜ್, ಮಿಕ್ಸಿ, ಗೃಹೋಪಕರಣಗಳು, ಇಲೆಕ್ಟ್ರಿಕ್ ವಯರಿಂಗ್ ನಾಶಗೊಂಡಿದೆ.


