ಆಗ್ರಾ: ತಾಜ್‌ಮಹಲ್ ಸ್ಮಾರಕವು ಮೂಲತಃ ಶಿವನ ದೇಗುಲ ಎಂದು ಪ್ರತಿಪಾದಿಸುತ್ತಾ ಕಾವಡಿಗಳನ್ನು ಹೊತ್ತು ಪ್ರವೇಶಿಸಲು ಯತ್ನಿಸಿದ್ದ ಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯರನ್ನು ಪೊಲೀಸರು ತಡೆದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
'ಸಂರಕ್ಷಿತ ತಾಣದಲ್ಲಿ ಸೋಮವಾರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಅಖಿಲ ಭಾರತ ಮಹಾಸಭಾ ಯೋಜಿಸಿತ್ತು.
ಸಂಘದ 11 ಮಹಿಳೆಯರು ಕಾವಡಿಯನ್ನು (ಗಂಗಾ ಜಲ ಇರುವ ಮಡಿಕೆ) ಹೊತ್ತು ತಾಜ್‌ಮಹಲ್‌ನತ್ತ ಧಾವಿಸಿದ್ದರು. ಮಾರ್ಗ ಮಧ್ಯೆ ಅವರನ್ನು ತಡೆಯಲಾಯಿತು. ನಂತರ ಅವರನ್ನು ರಾಜೇಶ್ವರಿ ದೇಗುಲಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು 'ಜಲಾಭಿಷೇಕ' ನಡೆಸಿದರು' ಎಂದು ಪೊಲೀಸರು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ರಾಥೋಡ್ ಅವರು, 'ತಾಜ್‌ಮಹಲ್‌ನಲ್ಲಿ 'ಕವ್ವಾಲಿ' ನಡೆಸಬಹುದು ಎಂದಾದರೆ ಇಲ್ಲಿ ಪ್ರಾರ್ಥನೆ ಸಲ್ಲಿಸಲೂ ಅವಕಾಶ ನೀಡಬೇಕು. ಈ ಬಾರಿ ನಮ್ಮನ್ನು ತಡೆಯಲಾಗಿದೆ. ಆದರೆ ಇಂಥ ಹಲವು ಸೋಮವಾರಗಳು ಶ್ರಾವಣದಲ್ಲಿ ಬರುತ್ತವೆ. ಮತ್ತೊಮ್ಮೆ ಕಾವಡಿ ಹೊತ್ತು ಬರುತ್ತೇವೆ' ಎಂದು ಹೇಳಿದರು.

