ತಿರುವನಂತಪುರ: ರಸಪ್ರಶ್ನೆ ಕಾರ್ಯಕ್ರಮವೊಂದರಲ್ಲಿ ಸಾವರ್ಕರ್ ಕುರಿತ ಪ್ರಶ್ನೆ ಕೇಳಿ, ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿದ ಕಾರಣಕ್ಕೆ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಿರುವುದನ್ನು ಬಿಜೆಪಿ ಆಕ್ಷೇಪಿಸಿದೆ. ಅಲ್ಲದೇ, ಆಡಳಿತಾರೂಢ ಕಾಂಗ್ರೆಸ್ನ ಮಿತ್ರ ಪಕ್ಷವಾಗಿರುವ ಮುಸ್ಲಿಂ ಲೀಗ್ಗೆ ತಮ್ಮನ್ನು ಕೆಣಕದಂತೆ ಎಚ್ಚರಿಕೆಯನ್ನೂ ನೀಡಿದೆ.
'ಹಿಂದುತ್ವ ಸಿದ್ಧಾಂತವಾದಿ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸುವ ರಸಪ್ರಶ್ನೆ ರೂಪಿಸಿದ್ದರ ಹಿಂದೆ ಇನ್ನಷ್ಟು ಶಿಕ್ಷಕರ ಪಾತ್ರವಿದೆ ಎಂದು ತಿಳಿದುಬಂದರೆ ಅವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು' ಎಂದು ಮುಸ್ಲಿಂ ಲೀಗ್ನ ನಾಯಕ, ಸಾಮಾನ್ಯ ಶಿಕ್ಷಣ ಸಚಿವ ಎನ್.ಸಂಶುದ್ದೀನ್ ಹೇಳಿದ್ದಾರೆ.
ಈ ಕುರಿತಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿ, 'ವೀರ ಸಾರ್ವಕರ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ನಿಮಗೆ ಅವರು ಇಷ್ಟವಿಲ್ಲದಿದ್ದರೆ, ಇಷ್ಟ ಪಡಬೇಡಿ. ಆದರೆ, ಸಾವರ್ಕರ್ ವಿಚಾರದಲ್ಲಿ ಮುಸ್ಲಿಂ ಲೀಗ್ ಹಸ್ತಕ್ಷೇಪ ಮಾಡಕೂಡದು. ನಮ್ಮನ್ನು ಕೆಣಕಬೇಡಿ' ಎಂದೂ ಎಚ್ಚರಿಸಿದ್ದಾರೆ.
ಇದೇ ವೇಳೆ, 'ವಂದೇ ಮಾತರಂ' ಅನ್ನು ರಾಜ್ಯದಲ್ಲಿ ಪೂರ್ಣವಾಗಿ ಹಾಡುಲಾಗುವುದಿಲ್ಲ ಎಂಬ ಕಾಂಗ್ರೆಸ್ ನಿರ್ಧಾರವನ್ನೂ ಟೀಕಿಸಿ, 'ಈ ದೇಶದ ರಾಷ್ಟ್ರ ಗೀತೆ, ರಾಷ್ಟ್ರೀಯ ಗೀತೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ನಿರ್ಧರಿಸಲಾಗಿದೆ. ಹೀಗಿರುವಾಗ ಕಾಂಗ್ರೆಸಿಗರು ಈಗ 'ವಂದೇ ಮಾತರಂ' ಪೂರ್ಣವಾಗಿ ಹಾಡುವುದಿಲ್ಲ ಎಂದು ಏಕೆ ಹೇಳುತ್ತಾರೆ ? ಅವರಿಗೆ 'ವಂದೇ ಮಾತರಂ' ಹಾಡಲು ತೊಂದರೆ ಇದ್ದರೆ ಇಟಲಿಯ ರಾಷ್ಟ್ರಗೀತೆಯನ್ನೇ ಹಾಡಲಿ. ಬೇಕಿದ್ದರೆ ಕಾಂಗ್ರೆಸ್ನ ನಾಯಕರೆಲ್ಲರಿಗೂ ಅದರ ಪ್ರತಿ ಕಳುಹಿಸುತ್ತೇನೆ' ಎಂದೂ ಲೇವಡಿ ಮಾಡಿದ್ದಾರೆ.
ಜತೆಗೆ ಸಿಪಿಎಂ ಕುರಿತು ವಾಗ್ದಾಳಿ ನಡೆಸಿ, 'ಅವರು ಬೇಕಿದ್ದರೆ ಕಾರ್ಲ್ ಮಾರ್ಕ್ಸ್ನ ಜರ್ಮನ್ ಗೀತೆ ಹಾಡಿಕೊಳ್ಳಲಿ. ನಾವು (ಬಿಜೆಪಿಗರು) ಭಾರತೀಯರು. ಭಾರತೀಯ ನಾಗರಿಕರಾಗಿ 'ವಂದೇ ಮಾತರಂ' ಮತ್ತು 'ಜನ ಗಣ ಮನ' ಎರಡನ್ನೂ ನಾವು ಪೂರ್ಣವಾಗಿ ಹಾಡುತ್ತೇವೆ' ಎಂದೂ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

