ನವದೆಹಲಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ವಿಶ್ವನಾಥ್ ಶರ್ಮಾ ಅವರು ಶುಕ್ರವಾರ ನಿಧನರಾಗಿದ್ದಾರೆ.
1965ರಲ್ಲಿ ನಡೆದಿದ್ದ ಭಾರತ-ಪಾಕಿಸ್ತಾನದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶರ್ಮಾ (96) ಅವರು 1988ರಿಂದ 1990ರವರೆಗೆ ದೇಶದ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
1950ರಲ್ಲಿ ಸೇನೆಗೆ ಸೇರಿದ್ದ ಶರ್ಮಾ ಅವರು 1965ರ ಯುದ್ಧಕ್ಕೆ ಮೊದಲು ಬ್ರಿಗೇಡಿಯರ್ ಆಗಿ ಪದೋನ್ನತಿ ಪಡೆದಿದ್ದರು. ದೇಶಕ್ಕೆ ಸಲ್ಲಿಸಿದ ವಿಶೇಷ ಸೇವೆಗಾಗಿ 1977ರಲ್ಲಿ ಅತಿ ವಿಶಿಷ್ಠ ಸೇವಾ ಪದಕವನ್ನು ಪಡೆದಿದ್ದರು. 1984ರಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ಶರ್ಮಾ ಅವರಿಗೆ ಪರಮ ವಿಶಿಷ್ಠ ಸೇವಾ ಪದಕ ಲಭಿಸಿತ್ತು.
'ಸ್ವತಂತ್ರ ಭಾರತದ ಮೊದಲ ಪರಮವೀರ ಚಕ್ರ ಪುರಸ್ಕೃತ ಮೇಜರ್ ಸೋಮನಾಥ ಶರ್ಮ ಅವರ ಕಿರಿಯ ಸಹೋದರ ವಿಶ್ವನಾಥ್ ಅವರು ತಮ್ಮ ಕುಟುಂಬದ ಶೌರ್ಯ ಮತ್ತು ನಿಸ್ವಾರ್ಥ ಸೇವೆಯ ಪರಂಪರೆಯನ್ನು ಎತ್ತಿಹಿಡಿದಿದ್ದರು' ಎಂದು ಸೇನೆ ತಿಳಿಸಿದೆ.

