ನವದೆಹಲಿ: 25 ದಿನಗಳ ಹಿಂದೆ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗ, ಸಂಖ್ಯಾಬಲ ಕುಸಿದಿರುವ ಪ್ರತಿಪಕ್ಷಗಳು ನರೇಂದ್ರ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ಆದರೆ ಬಿಜೆಪಿ ವಿರೋಧಿ ಪಕ್ಷಗಳೆಲ್ಲಾ ಸೇರಿಕೊಂಡು ಸರ್ಕಾರವನ್ನು ಕಟ್ಟಿ ಹಾಕಿದವು. ಸಚಿವರೊಬ್ಬರು ರಾಜೀನಾಮೆ ನೀಡುವಂತೆ ಮಾಡಿದ ವಿದ್ಯಾರ್ಥಿ ಚಳವಳಿಯ ಪಾತ್ರವೂ ಅದಕ್ಕೆ ನೆರವಾಯಿತು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹುಮ್ಮಸ್ಸಿನೊಂದಿಗೆ ಬಿಜೆಪಿ ಕಲಾಪಕ್ಕೆ ತಯಾರಾಗಿತ್ತು. ಅಲ್ಲದೆ ಟಿಎಂಸಿ, ಎಎಪಿ, ಶಿವಸೇನಾ (ಯುಟಿಬಿ) ಹಾಗೂ ಬಿಜೆಡಿ ಪಕ್ಷಗಳ ಉಭಯ ಮನೆಯ 37 ಸಂಸದರನ್ನು ತನ್ನ ಪಾಳಯಕ್ಕೆ ಸೆಳೆದು, ಡಿಎಂಕೆಯ ಬೆಂಬಲದೊಂದಿಗೆ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಒಪ್ಪಿಗೆ ಪಡೆಯುವ ಉತ್ಸಾಹದೊಂದಿಗೆ ಅಡಿ ಇಟ್ಟಿತ್ತು. ಆದರೆ ಪ್ರತಿಪಕ್ಷಗಳ ಒಗ್ಗಟ್ಟಿನ ತಂತ್ರಗಾರಿಕೆಯಿಂದಾಗಿ ಬಿಜೆಪಿ ಹಿನ್ನಡೆ ಅನುಭವಿಸಿತ್ತು.
ವಿವಾದಿತ ಮಸೂದೆಗಳಿಗೆ ಬ್ರೇಕ್
ಸುಮಾರು 19 ದಿನ ನಡೆದ ಕಲಾಪ ಗುರುವಾರ ಅಂತ್ಯಗೊಂಡಿದೆ. ಲೋಕಸಭೆಯಲ್ಲಿ ಸುಮಾರು ಶೇ 19 ಹಾಗೂ ರಾಜ್ಯಸಭೆಯಲ್ಲಿ ಶೇ 39 ರಷ್ಟು ಕಲಾಪ ಫಲ ಕಂಡಿದೆ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಕ್ಷೇತ್ರ ಮರುವಿಂಗಡಣೆ ಜೊತೆಗೆ ಎನ್‌ಡಿಎ ಸರ್ಕಾರದ ಬಹುಚರ್ಚಿತ 'ಎಫ್‌ಸಿಆರ್‌ಎ' ಮತ್ತು ಶಿಕ್ಷಣ ಸೇರಿ ಹಲವು ಮಸೂದೆಗಳು ಮಂಡನೆಯಾಗದಂತೆ ತಡೆದಿವೆ.
ಈ ನಡುವೆ, ತಮಿಳುನಾಡಿನಲ್ಲಿ ಚುನಾವಣೆ ಬಳಿಕ ಟಿವಿಕೆಗೆ ಬಂಬಲ ನೀಡಿದ್ದರಿಂದ ಮುನಿಸಿಕೊಂಡಿರುವ ಡಿಎಂಕೆ, ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಬದಲಾಗಿರುವ ರಾಜಕೀಯ ಸನ್ನಿವೇಶ ಹಾಗೂ ಕೆಲವು ವಿರೋಧ ಪಕ್ಷಗಳ ತಂತ್ರದಿಂದಾಗಿ, ಡಿಎಂಕೆಯು ಕ್ಷೇತ್ರ ಮರುವಿಂಗಡಣೆಗೆ ಮಸೂದೆಗೆ ಬೆಂಬಲ ನೀಡದಂತೆ ನೋಡಿಕೊಳ್ಳಲಾಯಿತು.
ಅಮಿತ್ ಶಾಗೆ ಇಕ್ಕಟ್ಟು
ಇದಲ್ಲದೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನಡೆಸಿದ ಬಲಪ್ರಯೋಗದ ಬಗ್ಗೆ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ತಾವು ನಡೆಸಿದ ನಿರಂತರ ಪ್ರತಿಭಟನೆಯಿಂದಾಗಿ ಗೃಹ ಸಚಿವ ಅಮಿತ್ ಶಾ ಸದನದಿಂದ ದೂರ ಉಳಿಯುವಂತಾಯಿತು ಎಂದು ಪ್ರತಿಪಕ್ಷದ ನಾಯಕರು ಹೇಳಿದ್ದಾರೆ. ಅಧಿವೇಶನದ ಕೊನೆಯ ದಿನವಾದ ಗುರುವಾರ ಮೊದಲ ಬಾರಿಗೆ ಅವರು ಲೋಕಸಭೆಯಲ್ಲಿ ಕೆಲವೇ ಕ್ಷಣಗಳು ಕಾಣಿಸಿಕೊಂಡರು ಎಂದು ಅವರು ತಿಳಿಸಿದ್ದಾರೆ.
ಈ ಹಿಂದಿನ ಬಜೆಟ್ ಅಧಿವೇಶನಕ್ಕೆ ಹೋಲಿಸಿದರೆ ಶಾ ಅವರ ಈ ನಡವಳಿಕೆ ಸಂಪೂರ್ಣ ತದ್ವಿರುದ್ಧವಾಗಿತ್ತು. ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ, ನಕ್ಸಲ್ ಭೀತಿ ಹಾಗೂ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಚರ್ಚೆ ವೇಳೆ ಮಂಚೂಣಿಯಲ್ಲಿ ನಿಂತು ವಿರೋಧ ಪಕ್ಷಗಳಿಗೆ ಶಾ ಉತ್ತರಿಸಿದ್ದರು.
ಏಪ್ರಿಲ್‌ನಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿಕೊಳ್ಳಲು ಸರ್ಕಾರ ನಡೆಸಿದ ಪ್ರಯತ್ನದ ನೇತೃತ್ವವನ್ನೂ ಶಾ ಅವರೇ ವಹಿಸಿದ್ದರು. ಆದರೆ, ಆ ಪ್ರಯತ್ನ ವಿಫಲಗೊಂಡಿತ್ತು.
ಬಲ ಕೊಟ್ಟ ವಿದ್ಯಾರ್ಥಿ ಪ್ರತಿಭಟನೆ
ಜಂತರ್ ಮಂತರ್‌ನಲ್ಲಿ ಏಕಾಏಕಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಕಲಾಪದ ಮೊದಲನೆ ದಿನ ನಡೆದ 'ಚಲೋ ಸಂಸತ್' ಹೋರಾಟದಲ್ಲಿ ಶಸ್ತ್ರ ರಹಿತರಾಗಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಅಶ್ರುವಾಯು ಹಾಗೂ ಪೆಲೆಟ್ ಗನ್ ಪ್ರಯೋಗದ ಘಟನೆಯು ವಿರೋಧ ಪಕ್ಷಗಳಿಗೆ ಅಖಾಡಲ್ಲಿ ಗಟ್ಟಿ ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟಿತು.
ಪ್ರತಿಪಕ್ಷವು ತನ್ನ ಕಾರ್ಯತಂತ್ರವನ್ನು ಮತ್ತಷ್ಟು ಬಿಗಿಗೊಳಿಸಿತು. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಹಾಗೂ ಅಯೋಧ್ಯೆಯ ರಾಮ ಮಂದಿರ ದೇಣಿಗೆ ಕಳವು ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಅಗ್ರಹಿಸಿ ವಿರೋಧ ಪಕ್ಷಗಳು ಸದನದ ಒಳಗೂ ಹೊರಗೂ ಪ್ರತಿಭಟನೆ ನಡೆಸಿದವು.
ಇದರ ಜೊತೆಗೆ ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗ ಖಂಡಿಸಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ನಿವಾಸದ ಮುಂದೆ ಅಚ್ಚರಿಯ ಪ್ರತಿಭಟನೆಯನ್ನೂ ನಡೆಸಿದರು. ಅವರನ್ನು ಸೇರಿ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಜೊತೆಗೆ ಪೆಲೆಟ್ ಗನ್ ಪ್ರಯೋಗದಿಂದ ಗಾಯಗೊಂಡವರನ್ನೂ ರಾಹುಲ್ ಗಾಂಧಿ ಮಾಧ್ಯಮದ ಮುಂದೆ ಕರೆತಂದರು.
ತೀವ್ರ ಒತ್ತಡದ ಪರಿಣಾಮವಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ರಾಜೀನಾಮೆ ನೀಡಬೇಕಾಯಿತು. ಅಧಿವೇಶನ ಮುಕ್ತಾಯಕ್ಕೆ ಒಂದು ದಿನ ಬಾಕಿ ಇರುವಾಗ ಶಾ ಅವರು ಇಕ್ಕಟ್ಟು ಬಗೆಹರಿಸಲು ಪ್ರಯತ್ನ ನಡೆಸಿದರಾದರೂ, ಅಷ್ಟರಲ್ಲಾಗಲೇ ಕಾಲ ಮೀರಿತ್ತು.
ವಿರೋಧ ಪಕ್ಷಗಳ ಗೆಲುವು
ಸರ್ಕಾರ ಮತ್ತು ಪ್ರತಿಪಕ್ಷದ ನಡುವಿನ ಮಾತುಕತೆ ಬಹುತೇಕ ಸಂಪೂರ್ಣವಾಗಿ ಕುಸಿದಿರುವುದು ಸ್ಪಷ್ಟವಾಯಿತು. ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಇದುವರೆಗೆ ಯಾವುದೇ ಹೇಳಿಕೆ ನೀಡದ ಅಮಿತ್ ಶಾ ಅವರು ಸ್ಪೀಕರ್ ಆಯೋಜಿಸುವ ಸಾಂಪ್ರದಾಯಿಕ ಚಹಾ ಕೂಟದಲ್ಲಿ ಭಾಗವಹಿಸಿದರೆ, ತಾವು ಅದಕ್ಕೆ ಹಾಜರಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿತು.
ಶಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೇ ಪ್ರತಿಪಕ್ಷದ ಗೆಲುವಲ್ಲ. ಕ್ಷೇತ್ರ ಮರುವಿಂಗಡಣೆ, ಎಫ್‌ಸಿಆರ್‌ಎ, ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ, ಭಾರತೀಯ ಸಾಂಖ್ಯಿಕ ಸಂಸ್ಥೆ ಹಾಗೂ ಬಂಧನಕ್ಕೊಳಗಾದ ರಾಜಕೀಯ ನಾಯಕರನ್ನು ಹುದ್ದೆಯಿಂದ ತೆಗೆದುಹಾಕುವ ಕುರಿತ ಮಸೂದೆಗಳನ್ನು ಅಂಗೀಕರಿಸಲು ಸರ್ಕಾರಕ್ಕೆ ಸಾಧ್ಯವಾಗದಿರುವುದನ್ನೂ ಕೂಡ ಪ್ರತಿಪಕ್ಷಗಳು ಸಾಧಿಸಿದ ಮೇಲುಗೈ.

