ಕೋಲ್ಕತ್ತ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಪಶ್ಚಿಮ ಅನಂತ ಮಹಾರಾಜ್ ಅವರಿಗೆ ಈ ಹಿಂದೆ ನೀಡಲಾಗಿದ್ದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಬಂಗ ವಿಭೂಷಣ' ಅನ್ನು ಹಿಂಪಡೆದುಕೊಂಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ನೇತಾಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಬಂಧನ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪೊಲೀಸರಿಗೆ ನಿರ್ದೇಶನ ನೀಡಿದ ಮರುದಿನವೇ ಈ ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸರ್ಕಾರವು, ಪ್ರಶಸ್ತಿಯನ್ನು ಅವರ ಬಳಿಯೇ ಮುಂದುವರಿಸುವುದು ಅದರ ಘನತೆ, ಪ್ರತಿಷ್ಠೆ ಮತ್ತು ಉದ್ದೇಶಕ್ಕೆ ಅಪಮಾನದಂತೆ ಎಂದು ತಿಳಿಸಿದೆ.
ಅನಂತ ಮಹಾರಾಜ್ ಅವರು ನೇತಾಜಿ ಅವರನ್ನು 'ಯುದ್ಧಾಪರಾಧಿ' ಎಂದು ಕರೆದಿದ್ದಲ್ಲದೆ, ಅವರ ನಾಯಕತ್ವ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆಜಾದ್ ಹಿಂದ್ ಫೌಜ್‌ನ(ಐಎನ್‌ಎ) ಪಾತ್ರವನ್ನು ಪ್ರಶ್ನಿಸಿದ್ದರು.
ನೇತಾಜಿ ಅವರಿಗೆ ಆಜಾದ್ ಹಿಂದ್ ಫೌಜ್‌ನಂತಹ ಸೈನ್ಯವನ್ನು ಸಂಘಟಿಸುವ ಮತ್ತು ಮುನ್ನಡೆಸುವ ಸಾಮರ್ಥ್ಯವಿರಲಿಲ್ಲ ಎಂದು ಹೇಳಿದ್ದ ಅವರು, ಐಎನ್‌ಎ ಅನ್ನು ನೇತಾಜಿ ದುರುಪಯೋಗಪಡಿಸಿಕೊಂಡಿದ್ದರು ಎಂದು ಆರೋಪಿಸಿದ್ದರು.
ಈ ವರ್ಷ ಫೆಬ್ರುವರಿ 21 ರಂದು ಕೋಲ್ಕತ್ತದಲ್ಲಿ ನಡೆದ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾರಾಜ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದ್ದರು.

