ವಾಷಿಂಗ್ಟನ್: ಅಮೆರಿಕದ ಆಮದಿನ ಶೇ 99.4ರಷ್ಟು ಪಾಲು ಹೊಂದಿರುವ 60 ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ದೇಶದ ಒಳಗಡೆಯೇ ತೀವ್ರ ವಿರೋಧ ವ್ಯಕ್ತವಾಗಿದೆ. ಅವರ ನಿರ್ಧಾರ ವಿರೋಧಿಸಿ ಡೆಮಾಕ್ರಟಿಕ್ ಆಡಳಿತವಿರುವ 25 ರಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಇದರಿಂದ ಟ್ರಂಪ್‌ಗೆ ಹೊಸ ಆಂತರಿಕ ಸವಾಲು ಎದುರಾಗಿದೆ.
ಬಲವಂತದ ಕಾರ್ಮಿಕ ಪದ್ಧತಿಯ ನಿಯಂತ್ರಣದಲ್ಲಿ ವಿಫಲವಾಗಿರುವ ನೆಪವೊಡ್ಡಿ ಟ್ರಂಪ್ ಆಡಳಿತವು, ಕಳೆದ ತಿಂಗಳು 60 ದೇಶಗಳ ಮೇಲೆ ಶೇ 10 ರಿಂದ 12.5 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿತ್ತು.
ಈ ನಿರ್ಧಾರವನ್ನು ಖಂಡಿಸಿ ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಷಿಯಾ ಜೇಮ್ಸ್ ಹಾಗೂ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ರಾಬ್ ಬೊಂಟಾ ನೇತೃತ್ವದ 25 ರಾಜ್ಯಗಳ ಒಕ್ಕೂಟವು ಅಮೆರಿಕದ ಅಂತರರಾಷ್ಟ್ರೀಯ ವ್ಯಾಪಾರ ನ್ಯಾಯಾಲಯದಲ್ಲಿ ದಾವೆ ಹೂಡಿದೆ.
ಗ್ರಾಹಕರಿಗೆ ಹೊರೆ
ಈ ಕಾನೂನುಬಾಹಿರ ಸುಂಕದಿಂದ ಅಮೆರಿಕದ ಸಾಮಾನ್ಯ ಜನತೆ ಮತ್ತು ಉದ್ಯಮಿಗಳ ಮೇಲೆ ವೆಚ್ಚದ ಹೊರೆ ಹೆಚ್ಚಾಗಲಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ ಅನುಭವಿಸಿದ ಮೇಲೆಯೂ, ಟ್ರಂಪ್ ಆಡಳಿತವು ಕಾನೂನುಬಾಹಿರವಾಗಿ ಸುಂಕ ಹೆಚ್ಚಿಸಲು ಯತ್ನಿಸುತ್ತಿದೆ ಎಂದು ಜೇಮ್ಸ್ ತಿಳಿಸಿದ್ದಾರೆ.
ಭಾರತದ ಮೇಲಿನ ಸುಂಕ
ಬಲವಂತದಿಂದ ಕಾರ್ಮಿಕರನ್ನು ದುಡಿಸಿಕೊಳ್ಳುವ ಕಡೆಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಲು ವಿಫಲವಾಗಿರುವ ಆರೋಪದ ಅಡಿಯಲ್ಲಿ ಭಾರತ ಸೇರಿದಂತೆ 16 ದೇಶಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸಲಾಗಿತ್ತು. ಆರಂಭದಲ್ಲಿ ಭಾರತಕ್ಕೆ ಶೇ 12.5 ರಷ್ಟು ಸುಂಕ ವಿಧಿಸಲು ಪ್ರಸ್ತಾವಿಸಲಾಗಿತ್ತು.
ಆದರೆ, ಜೂನ್ 14 ರಂದು ಭಾರತ ತನ್ನ ವಿದೇಶಿ ವ್ಯಾಪಾರ ನೀತಿಗೆ ತಿದ್ದುಪಡಿ ತಂದು ಬಲವಂತದಿಂದ ಕಾರ್ಮಿಕರನ್ನು ದುಡಿಸಿಕೊಳ್ಳುವ ಕಡೆಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಈ ದರವನ್ನು ಶೇ 10 ಕ್ಕೆ ಇಳಿಸಲಾಯಿತು.
ಬಲವಂತದಿಂದ ಕಾರ್ಮಿಕರನ್ನು ದುಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಒಟ್ಟು 60 ದೇಶಗಳ ವಿರುದ್ಧ ಅಮೆರಿಕದಲ್ಲಿ ಮಾರ್ಚ್‌ನಲ್ಲಿ ತನಿಖೆ ಆರಂಭವಾಗಿತ್ತು. ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಸಂಸ್ಥೆ, 1974ರ ವ್ಯಾಪಾರ ಕಾಯ್ದೆಯ ಅಡಿ ಈ ಹೆಚ್ಚುವರಿ ಸುಂಕ ವಿಧಿಸಲಾಗಿದೆ ಎಂದು ಟ್ರಂಪ್ ಆಡಳಿತ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಈ ಕ್ರಮ ಕಾನೂನುಬಾಹಿರ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

