ಅಡಿಸ್ ಅಬಾಬಾ: ಇಥಿಯೋಪಿಯಾದ ಅಮಹಾರಾ ಪ್ರದೇಶದಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದು ಏಳು ಜನರು ಗಾಯಗೊಂಡಿದ್ದಾರೆ. ಹಲವರು ನಾಪತ್ತೆಯಾಗಿರುವ ಮಾಹಿತಿಯಿದ್ದು ರಕ್ಷಣೆ ಮತ್ತು ಶೋಧ ಕಾರ್ಯ ಮುಂದುವರಿದಿದೆ.
ಈ ದುರಂತವು ` ಸೈಂಟ್ ಮೇರಿ' ಮಠದಲ್ಲಿ ಸಂಭವಿಸಿದ್ದು `ಪವಿತ್ರ ತೀರ್ಥ ಸ್ನಾನ' ವಿಧಿಗಾಗಿ ಇಲ್ಲಿ ನೂರಾರು ಭಕ್ತರು ಜಮಾಯಿಸಿದ್ದರು. ಗುಡ್ಡ ಕುಸಿದು ವಿಶಾಲವಾದ ಬಂಡೆಗಳು ಉರುಳಿ ಭಕ್ತರ ಮೇಲೆ ಬಿದ್ದಿದ್ದರಿಂದ ದುರಂತದ ತೀವ್ರತೆ ಹೆಚ್ಚಾಯಿತು. ಮಣ್ಣಿನ ತ್ಯಾಜ್ಯದ ಅಡಿಯಲ್ಲಿ ಇನ್ನೂ ಹಲವರು ಸಿಲುಕಿಕೊಂಡಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸ್ಥಳೀಯ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

