ನವದೆಹಲಿ: ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ದೇಶದ ಬಹುತೇಕ ಚಿಲ್ಲರೆ ಮಾರುಕಟ್ಟೆಗಳಲ್ಲಿ ಸಕ್ಕರೆ ದರ ಪ್ರತಿ ಕೆಜಿಗೆ ₹ 60ಕ್ಕಿಂತ ಹೆಚ್ಚಾಗಿಯೇ ಉಳಿದಿದೆ.
ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯದ ಮಾಹಿತಿ ಪ್ರಕಾರ, ದೇಶದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆ.ಜಿ ಸಕ್ಕರೆ ಬೆಲೆ ಭಾನುವಾರ ಸರಾಸರಿ ₹64.24 ಇದೆ.
ಇದು ಒಂದು ವಾರದ ಹಿಂದೆ ₹63.12ರಷ್ಟಿತ್ತು. ಅಂದರೆ, ಶೇ 1.77ರಷ್ಟು ಹೆಚ್ಚಳವಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಸಕ್ಕರೆ ದರ ಶೇ 30ರಷ್ಟು ಹಾಗೂ ಹಿಂದಿನ ವರ್ಷದಕ್ಕೆ ಹೋಲಿಸಿದರೆ ಶೇ 38.63ರಷ್ಟು ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಗರಿಷ್ಠ ಬೆಲೆ ಕೆ.ಜಿಗೆ ₹ 74 ಇದೆ.
ಒಂದು ಕೆ.ಜಿ. ಸಕ್ಕರೆಗೆ ದೆಹಲಿಯಲ್ಲಿ ₹ 62, ಮುಂಬೈನಲ್ಲಿ ₹ 66, ಚೆನ್ನೈನಲ್ಲಿ ₹ 63 ಮತ್ತು ರಾಂಚಿಯಲ್ಲಿ ₹ 68ರಂತೆ ಮಾರಾಟವಾಗಿದೆ.
ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹59.73 ಇದೆ. ಕಳೆದ ತಿಂಗಳಿಗೆ ಹೋಲಿಸಿದರೆ ಶೇ 31ರಷ್ಟು ಹೆಚ್ಚಳವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಇದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಬೆಲೆ ಏರಿಕೆಗೆ ಕಾರ್ಖಾನೆಗಳೇ ಕಾರಣ ಎಂದು ದೂರಿದೆ. 2025-26ನೇ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಉತ್ಪಾದನೆಯು ಮೊದಲು ಅಂದಾಜಿಸಿದ್ದ 343 ಲಕ್ಷ ಟನ್‌ಗಳಿಂದ 306 ಲಕ್ಷ ಟನ್‌ಗಳಿಗೆ ಇಳಿಯುವ ನಿರೀಕ್ಷೆ ಇದೆ. ಆದಾಗ್ಯೂ, ಸರ್ಕಾರ ಈ ಹೇಳಿಕೆ ನೀಡಿದೆ.
ದೇಶದ ವಾರ್ಷಿಕ ಬೇಡಿಕೆ ಸುಮಾರು 280-285 ಲಕ್ಷ ಟನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

