ನವದೆಹಲಿ: ಶಿವಸೇನೆ ಪಕ್ಷದ ತಿದ್ದುಪಡಿ ಸಂವಿಧಾನದ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದ್ದು, ಮೂಲತಃ ಪ್ರಜಾತಾಂತ್ರಿಕ ತತ್ವಗಳ ಆಧಾರದ ಮೇಲೆ ರಚನೆಯಾಗಿದ್ದ ಪಕ್ಷವು ತಿದ್ದುಪಡಿಯ ಬಳಿಕ ಅಕ್ಷರಶಃ 'ಏಕವ್ಯಕ್ತಿ ಪಕ್ಷ'ವಾಗಿ ರೂಪಾಂತರಗೊಂಡಿದೆ ಎಂದು ಅಭಿಪ್ರಾಯಪಟ್ಟಿತು.
ಏಕನಾಥ್ ಶಿಂದೆ ನೇತೃತ್ವದ ಬಣವನ್ನು ನೈಜ ಶಿವಸೇನೆ ಎಂದು ಗುರುತಿಸಿದ ಚುನಾವಣಾ ಆಯೋಗದ ತೀರ್ಪನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ ಅವರನ್ನು ಒಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
"ಸಾಂವಿಧಾನಿಕ ಸಂಸ್ಥೆಗಳು ಪ್ರಜಾತಾಂತ್ರಿಕ ಮೌಲ್ಯಗಳನ್ನು ಕಾಪಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಹಾಗಿರುವಾಗ ಪ್ರಜಾತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ರಾಜಕೀಯ ಪಕ್ಷಗಳನ್ನೂ ಪರಿಶೀಲಿಸಬೇಕಾಗುತ್ತದೆ" ಎಂದು ನ್ಯಾಯಪೀಠ ಹೇಳಿತು.
"ಮೂಲ ಶಿವಸೇನೆ ಸಂವಿಧಾನವು ಪ್ರಜಾತಾಂತ್ರಿಕ ತತ್ವಗಳ ಮೇಲೆ ಆಧಾರಿತವಾಗಿತ್ತು. ಆದರೆ ನಂತರ ಅದರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಅದು ಅಕ್ಷರಶಃ ಏಕವ್ಯಕ್ತಿ ರಚನೆಯಾಗಿ ಬದಲಾಗಿದೆ" ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಉದ್ಧವ್ ಠಾಕ್ರೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಪಕ್ಷದ ಚಿಹ್ನೆ ಕುರಿತ ವಿವಾದವನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ ಪಕ್ಷದ ಸಂವಿಧಾನದ ಮಾನ್ಯತೆಯನ್ನು ಪರಿಶೀಲಿಸುವ ಮೂಲಕ ಚುನಾವಣಾ ಆಯೋಗ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ವಾದಿಸಿದರು.
"ಪಕ್ಷದ ಸಂವಿಧಾನದ ಮಾನ್ಯತೆಯನ್ನು ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಇದೇ ಈ ಪ್ರಕರಣದ ಪ್ರಮುಖ ಪ್ರಶ್ನೆಯಾಗಿದೆ" ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, "ಈ ಪ್ರಶ್ನೆ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯನ್ನು ಮೀರುವ ವಿಚಾರವಾಗಿದೆ. ರಾಜಕೀಯ ಪಕ್ಷಗಳು ಕೂಡ ಪ್ರಜಾಸತ್ತಾತ್ಮಕ ರೀತಿಯಲ್ಲೇ ಕಾರ್ಯನಿರ್ವಹಿಸಬೇಕೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ" ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ಕಪಿಲ್ ಸಿಬಲ್, ರಾಜಕೀಯ ಪಕ್ಷಗಳು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ತಮ್ಮ ವಿರೋಧವಿಲ್ಲ. ಆದರೆ ಸಾಂವಿಧಾನಿಕ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳನ್ನು ಒಂದೇ ಮಾನದಂಡದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ವಾದಿಸಿದರು.
ಚುನಾವಣಾ ಆಯೋಗದ ತೀರ್ಪು ರಾಜಕೀಯ ಪಕ್ಷವೊಂದನ್ನು ಅದರ ಶಾಸನಾತ್ಮಕ ಘಟಕದ ಮಟ್ಟಕ್ಕೆ ಇಳಿಸಿದಂತಾಗಿದೆ. ಇದರಿಂದ ಚುನಾವಣಾ ಜನಾದೇಶದ ಬದಲಿಗೆ ಪಕ್ಷಾಂತರದ ಮೂಲಕ ಸರಕಾರಗಳನ್ನು ಬದಲಿಸುವ ಪೂರ್ವನಿದರ್ಶನ ಸೃಷ್ಟಿಯಾಗುತ್ತದೆ ಎಂದು ಉದ್ಧವ್ ಠಾಕ್ರೆ ಬಣ ವಾದಿಸಿತು.
ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 11ಕ್ಕೆ ಮುಂದೂಡಿತು.

