ಶ್ರೀನಗರ: ಮೂರು ದಶಕಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಗೂ 15 ದಿನಗಳ ಮುಂಚೆಯೇ ಸ್ತಬ್ಧವಾಗಿರುತ್ತಿದ್ದ ಕಾಶ್ಮೀರ ಇದೀಗ ಎಂದಿನಂತೆ ಲವಲವಿಕೆಯಿಂದ ತುಂಬಿರುವ ನಗರಿಯಾಗಿ ಮಾರ್ಪಾಡಾಗಿದೆ. ಭಯೋತ್ಪಾದಕರ ಭೀತಿಯಿಂದ ಮನೆಯಿಂದ ಹೊರಗೆ ಕಾಲಿಡಲು ಅಂಜುತ್ತಿದ್ದ ಜನರು ಈಗ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ.
ಸರ್ಕಾರಿ ಕಾರ್ಯಕ್ರಮಗಳ ಕೇಂದ್ರಬಿಂದುವಾಗಿದ್ದ ಶ್ರೀನಗರದ ಬಕ್ಷಿ ಕ್ರೀಡಾಂಗಣದ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಹಿಂದೆಲ್ಲಾ ಬ್ಯಾರಿಕೇಡ್ ಅಳವಡಿಸಿ, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿತ್ತು. ಐಇಡಿ ಸ್ಫೋಟಗಳ ಸಂಭವನೀಯತೆ ಪರಿಗಣಿಸಿ ಮೊಬೈಲ್ ನೆಟ್‌ವರ್ಕ್‌ಗಳನ್ನೂ ಸ್ಥಗಿತಗೊಳಿಸಲಾಗುತ್ತಿತ್ತು. ಅಂಗಡಿಗಳು ಮುಚ್ಚಿಯೇ ಇರುತ್ತಿದ್ದವು. ಹಾಲು-ಬ್ರೆಡ್ ತೆಗೆದುಕೊಳ್ಳುವುದಕ್ಕೂ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದರು.
ಕಳೆದ ಕೆಲವು ವರ್ಷಗಳಿಂದ ಭದ್ರತಾ ನಿಯೋಜನೆ ಮೊದಲಿನಂತೆಯೇ ಹೆಚ್ಚಾಗಿದ್ದರೂ ಜನಜೀವನಕ್ಕೆ ಯಾವುದೇ ಅಡ್ಡಿ ಆತಂಕಗಳು ಎದುರಾಗಿಲ್ಲ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನವೂ ಕಾಶ್ಮೀರದ ಎಂದಿನ ದಿನಗಳಂತೆಯೇ ಭಾಸವಾಗುತ್ತಿದೆ ಎಂದು ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

