ಚಂಡೀಗಡ: ಕುಖ್ಯಾತ ಜಗ್ಗು ಭಗವಾನ್‌ಪುರಿಯಾ ಗ್ಯಾಂಗ್‌ನ ಪ್ರಮುಖನೆನ್ನಲಾದ ಭಾರತೀಯ ಮೂಲದ ಮೇಜರ್ ಸಿಂಗ್‌ನನ್ನು ಅಮೆರಿಕದ ಫೆಡರಲ್ ತನಿಖಾ ಸಂಸ್ಥೆ (ಎಫ್‌ಬಿಐ), ಮೋಸ್ಟ್ ವಾಂಟೆಡ್ ಪಾತಕಿಗಳ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಅಮೆರಿಕದಲ್ಲಿ ಈ ಗ್ಯಾಂಗ್ ನಡೆಸುತ್ತಿರುವ ಕ್ರಿಮಿನಲ್ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಆರೋಪವನ್ನು ಆತ ಎದುರಿಸುತ್ತಿದ್ದಾನೆಂದು ಎಫ್‌ಬಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.
ತಲೆಮರೆಸಿಕೊಂಡಿರುವ ಮೇಜರ್ ಸಿಂಗ್ ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಹಾಗೂ ಮಾದಕದ್ರವ್ಯಗಳ ದಾಸ್ತಾನು ಮತ್ತು ಮಾರಾಟ ಇತ್ಯಾದಿ ಆರೋಪಗಳನ್ನು ಎದುರಿಸುತ್ತಿದ್ದಾನೆಂದು ಎಫ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನಲ್ಲಿ ಹುಟ್ಟಿದ್ದ ಜಗ್ಗು ಭಗವಾನ್‌ಪುರಿಯಾ ಗ್ಯಾಂಗ್ , ಪ್ರಸಕ್ತ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಾರ್ಯಾಚರಿಸುತ್ತಿದೆ.
ಮೇಜರ್‌ಸಿಂಗ್ ವಿರುದ್ಧ ಭ್ರಷ್ಟ ಹಾಗೂ ಮಾಫಿಯಾ ಪ್ರಭಾವಿತ ಸಂಘಟನೆಗಳ (ರಿಕೋ) ತಡೆ ಕಾಯ್ದೆಯಡಿ ಮತ್ತು ಪರವಾನಿಗೆ ರಹಿತವಾಗಿ ಬಂದೂಕುಗಳ ಮಾರಾಟ ವ್ಯವಹಾರಗಳ ಸಂಚು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯವು ದೋಷಾರೋಪ ದಾಖಲಿಸಿಕೊಂಡಿತ್ತು.
ಮೇಜರ್ ಸಿಂಗ್ ಬಗ್ಗೆ ಮಾಹಿತಿಯಿರುವವರು ಅಮೆರಿಕದ ರಾಯಭಾರಿ ಕಚೇರಿ ಅಥವಾ ದೂತಾವಾಸ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬೇಕು ಎಂದು ಎಫ್‌ಬಿಐ ಕೋರಿದೆ.

