ನವದೆಹಲಿ: ಎರಡು ಗಂಟೆ ಹತ್ತು ನಿಮಿಷಗಳ ದಿಲ್ಲಿ-ಪುಣೆ ಸ್ಪೈಸ್‌ಜೆಟ್ ವಿಮಾನ ಪ್ರಯಾಣವು ಪ್ರಯಾಣಿಕರೊಬ್ಬರು ಬಣ್ಣಿಸಿದಂತೆ 'ಗ್ಯಾಸ್ ಚೇಂಬರ್'ನಂತಾಗಿ ಒಂಬತ್ತು ಗಂಟೆಗಳ ನರಕಯಾತನೆಯಾಗಿ ಬದಲಾಗಿತ್ತು. ವಿಮಾನದೊಳಗಿನ ಹವಾ ನಿಯಂತ್ರಣ (ಏಸಿ) ವ್ಯವಸ್ಥೆಯು ಕೈಕೊಟ್ಟಿದ್ದರಿಂದ ಮಂಗಳವಾರ ರಾತ್ರಿ ಪ್ರಯಾಣಿಕರು ಬೆವರಿನಲ್ಲಿ ತೊಯ್ದು ಹೋಗಿದ್ದರು.
ಇಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಟರ್ಮಿನಲ್ 1ರಿಂದ ರಾತ್ರಿ 9:45 ಕ್ಕೆ ಹೊರಡಬೇಕಿದ್ದ ಸ್ಲೈಸ್‌ಜೆಟ್‌ನ ಎಸ್‌ಜಿ-105 ಯಾನವು ಮುಕ್ಕಾಲು ಗಂಟೆ ವಿಳಂಬವಾಗಿ ನಿರ್ಗಮಿಸಿತ್ತು. ಪ್ರಯಾಣಿಕರು ವಿಮಾನವನ್ನು ಹತ್ತಿದ ಬಳಿಕ ಅವರಿಗೆ ಅತಿಯಾದ ಸೆಕೆ ಮತ್ತು ಉಸಿರುಗಟ್ಟಿದ ಅನುಭವವಾಗತೊಡಗಿತ್ತು.
ಸುದ್ದಿಸಂಸ್ಥೆ ಜೊತೆ ಮಾತನಾಡಿ ದುಃಸ್ವಪ್ನವನ್ನು ನೆನಪಿಸಿಕೊಂಡ ಪ್ರಯಾಣಿಕ ಲೇಹಪಾಲ್ ಜಾವಲ್ಗೆ,'ನಮಗೆ ಉಸಿರುಗಟ್ಟಿದಂತಾಗಿತ್ತು, ಆದರೆ ಶೀಘ್ರದಲ್ಲೇ ಎಸಿ ಕಾರ್ಯಾರಂಭವಾಗೊಳ್ಳುತ್ತದೆ ಮತ್ತು ಸೆಕೆ ಕಡಿಮೆಯಾಗುತ್ತದೆ ಎಂದು ನಾವು ಭಾವಿಸಿದ್ದೆವು. ನಾವೆಲ್ಲರೂ ಬೆವರಿನಲ್ಲಿ ತೊಯ್ದುಹೋಗಿದ್ದೆವು. ವಿಮಾನದಲ್ಲಿ 150 ಪ್ರಯಾಣಿಕರಿದ್ದರು ಮತ್ತು ಯಾವುದೇ ಏಸಿ ಅಥವಾ ಗಾಳಿಯಿರಲಿಲ್ಲ ' ಎಂದು ಹೇಳಿದರು.
ಒಂದೆಡೆ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಹೆಚ್ಚುತ್ತಿದ್ದ ತಾಪಮಾನದೊಂದಿಗೆ ಹೆಣಗಾಡುತ್ತಿದ್ದರೆ, ಇನ್ನೊಂದೆಡೆ ಪೈಲಟ್‌ಗಳು ವಿಮಾನವನ್ನು ಟೇಕಾಫ್ ಮಾಡಲು ಸಿದ್ಧತೆ ನಡೆಸುತ್ತಿದ್ದರು.
ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರಿದ್ದರು. ಪ್ರತಿಯೊಬ್ಬರೂ ಜೀವಭಯದಿಂದಿದ್ದರು. ಮಕ್ಕಳು ಅಳಲು ಪ್ರಾರಂಭಿಸಿದ್ದರು ಎಂದು ಜಾವಲ್‌ಗೆ ಹೇಳಿದರು.
ಘೋಷಣೆಗಳನ್ನು ಕೂಗುವ ಬದಲು ಶಿಸ್ತು ಕಾಯ್ದುಕೊಳ್ಳುವಂತೆ ತಮಗೆ ಸೂಚಿಸಲಾಗಿತ್ತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಹಲವು ದೂರುಗಳ ನಂತರ ವಿಮಾನ ಸಿಬ್ಬಂದಿ ಬ್ಲೋವರ್‌ಗಳನ್ನು ಚಾಲನೆ ಮಾಡಿದ್ದರು,ಆದರೆ ಅದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತ್ತು ಮತ್ತು ವಿಮಾನದ ಒಳಗಿನ ವಾತಾವರಣವನ್ನು ಗ್ಯಾಸ್ ಚೇಂಬರ್‌ನಂತೆ ಮಾಡಿತ್ತು ಎಂದು ಅವರು ತಿಳಿಸಿದರು.
ಗರ್ಭಿಣಿಯೋರ್ವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಪ್ರಜ್ಞೆ ತಪ್ಪುವ ಹಂತಕ್ಕೆ ತಲುಪಿದ್ದರು. ಆಕೆಗೆ ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ಜೀವಕ್ಕೇ ಅಪಾಯವಿದೆ ಎಂದು ಪ್ರಯಾಣಿಕರು ಎಚ್ಚರಿಸಿದಾಗ
ಎಲ್ಲರನ್ನೂ ಕೆಳಗಿಳಿಸಲಾಗಿತ್ತು ಮತ್ತು ಪುನಃ ವಿಮಾನ ಹತ್ತುವ ಮೊದಲು 20 ನಿಮಿಷ ಕಾಯುವಂತೆ ಸೂಚಿಸಲಾಗಿತ್ತು. ಆದರೆ, ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ರನ್‌ವೇಯಲ್ಲೇ ಕುಳಿತು ವಿಮಾನವನ್ನು ಬದಲಾಯಿಸುವಂತೆ ಒತ್ತಾಯಿಸಿದರು.
ಗರ್ಭಿಣಿಗೆ ವೈದ್ಯಕೀಯ ನೆರವು ನೀಡುವಲ್ಲಿ ವಿಳಂಬವಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ ಮತ್ತು ಗಂಟೆಗಳ ಕಾಲ ವಿಳಂಬವಾದರೂ ತಮಗೆ ಯಾವುದೇ ತಿಂಡಿ-ತಿನಿಸುಗಳ ವ್ಯವಸ್ಥೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಹಲವು ಗಂಟೆಗಳ ನಂತರ ಬಂದ ತಾಂತ್ರಿಕ ತಂಡವು ಸಮಸ್ಯೆಯನ್ನು ಗುರುತಿಸಿ ವಿಮಾನವನ್ನು ಬದಲಾಯಿಸಲು ಸಲಹೆ ನೀಡಿತ್ತು. ಅಂತಿಮವಾಗಿ ವಿಮಾನವು ಬೆಳಿಗ್ಗೆ ಐದು ಗಂಟೆಗೆ ಟೇಕಾಫ್ ಆಯಿತು.
ಘಟನೆಗೆ ಪ್ರತಿಕ್ರಿಯಿಸಿದ ಸ್ಪೈಸ್‌ಜೆಟ್ ವಕ್ತಾರರು, ತಾಂತ್ರಿಕ ದೋಷದಿಂದಾಗಿ ಟೇಕಾಫ್ ವಿಳಂಬವಾಗಿದೆ. ಪ್ರಯಾಣಿಕರಿಗೆ ಉಂಟಾದ ತೊಂದರೆಗಾಗಿ ಸಂಸ್ಥೆಯು ವಿಷಾದಿಸುತ್ತದೆ ಎಂದು ತಿಳಿಸಿದ್ದಾರೆ.

