HEALTH TIPS

ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ನ್ಯಾಯಾಧೀಶರ ಐಟಿ-ರಿಟರ್ನ್‌ಗಳ ಸಂಸ್ಕರಣೆಗೆ ದಿಲ್ಲಿ ಹೈಕೋರ್ಟ್ ತಡೆ

ನವದೆಹಲಿಹೊಸ ತೆರಿಗೆ ಪದ್ಧತಿಯಡಿಯಲ್ಲಿ ಕೆಲವು ಭತ್ಯೆಗಳಿಗೆ ವಿನಾಯಿತಿ ನೀಡುವ ಕುರಿತ ವಿವಾದದ ನಡುವೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಂಸ್ಕರಿಸದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.


ಹೊಸ ಆದಾಯ ತೆರಿಗೆ ಪದ್ಧತಿಯಡಿ ತಮ್ಮ ರಿಟರ್ನ್ಸ್ ಸಲ್ಲಿಸಿರುವ ನ್ಯಾಯಾಧೀಶರ ಪಾನ್ ನಂಬರ್ ಸೇರಿದಂತೆ ಅಗತ್ಯ ವಿವರಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳುವಂತೆ ಅವರ ಖಾಸಗಿ ಕಾರ್ಯದರ್ಶಿಗಳಿಗೆ ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ತಾ ಮತ್ತು ರಜನೀಶ್ ಕುಮಾರ್ ಗುಪ್ತಾ ಅವರ ಪೀಠವು ಸೂಚಿಸಿದೆ.

ದಿಲ್ಲಿ ತೆರಿಗೆ ವಕೀಲರ ಸಂಘವು (ಡಿಟಿಬಿಎ) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಜುಲೈ 22 ಮತ್ತು ಆಗಸ್ಟ್ 10 ರಂದು ಹೊರಡಿಸಲಾದ ಎರಡು ಪ್ರತ್ಯೇಕ ಆದೇಶಗಳಲ್ಲಿ ಈ ನಿರ್ದೇಶನಗಳನ್ನು ನೀಡಲಾಗಿದೆ.

ಅರ್ಜಿದಾರರ ಪ್ರಕಾರ, ಹೈಕೋರ್ಟ್ ನ್ಯಾಯಾಧೀಶರ ಕಾಯ್ದೆ 1954 ರ ಕಲಂ 22ಡಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವಾ ಷರತ್ತುಗಳು) ಕಾಯ್ದೆ 1958ರ ಕಲಂ 23ಡಿ ಪ್ರಕಾರ ನ್ಯಾಯಾಧೀಶರಿಗೆ ನೀಡಲಾಗುವ ಕೆಲವು ಭತ್ಯೆಗಳನ್ನು ಅವರ ಆದಾಯದ ಲೆಕ್ಕಾಚಾರದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ.

ಆದರೆ, ಸೆಪ್ಟೆಂಬರ್ 12, 2025ರಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯು ಹೊಸ ತೆರಿಗೆ ಪದ್ಧತಿಯಡಿ ಯಾವುದೇ ಕಡಿತ ಮತ್ತು ವಿನಾಯಿತಿಗಳಿಗೆ ಅವಕಾಶವಿಲ್ಲದಿರುವುದರಿಂದ ಬಾಡಿಗೆರಹಿತ ಅಧಿಕೃತ ನಿವಾಸ, ಸಾರಿಗೆ ಭತ್ಯೆ, ಆತಿಥ್ಯ ಭತ್ಯೆ ಮತ್ತು ಎಲ್‌ಟಿಸಿಯಂತಹ ಭತ್ಯೆಗಳಿಗೆ ತೆರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಅರ್ಜಿದಾರರು ಬೆಟ್ಟು ಮಾಡಿದ್ದಾರೆ.

ಮೇಲ್ನೋಟಕ್ಕೆ ಕಲಂ 22ಡಿ ಮತ್ತು 23ಡಿ ಆದಾಯ ತೆರಿಗೆ ಕಾಯ್ದೆಯ ಎಲ್ಲ ನಿಬಂಧನೆಗಳನ್ನು ಕಡೆಗಣಿಸಿವೆ ಮತ್ತು ಅರ್ಜಿಯಲ್ಲಿ ಎತ್ತಲಾದ ವಿಷಯವನ್ನು ಪರಿಶೀಲಿಸುವ ಅಗತ್ಯವಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಜುಲೈ 22ರ ತನ್ನ ಆದೇಶದಲ್ಲಿ ಹೇಳಿತ್ತು. ನ್ಯಾಯಾಧೀಶರು ತಮ್ಮ ರಿಟರ್ನ್ಸ್ ಅಥವಾ ಪರಿಷ್ಕೃತ ರಿಟರ್ನ್ಸ್ ಸಲ್ಲಿಸುವಾಗ ಈ ಭತ್ಯೆಯ ಮೊತ್ತವನ್ನು 'ಆದಾಯದ ಸ್ವರೂಪದಲ್ಲಿಲ್ಲದ ಸ್ವೀಕೃತಿಗಳು' ಎಂಬ ಶೀರ್ಷಿಕೆಯಡಿ ನಮೂದಿಸಬಹುದು ಎಂದು ಸ್ಪಷ್ಟಪಡಿಸಿರುವ ಉಚ್ಚ ನ್ಯಾಯಾಲಯವು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸಲ್ಲಿಸಿದ ರಿಟರ್ನ್‌ಗಳನ್ನು ಮುಂದಿನ ಆದೇಶದವರೆಗೆ ಸಂಸ್ಕರಿಸಬಾರದು ಮತ್ತು ಮುಂದುವರಿಸಬಾರದು ಎಂದು ಆದೇಶಿಸಿದೆ.

ಆಗಸ್ಟ್ 10 ರಂದು ಆದಾಯ ತೆರಿಗೆ ಇಲಾಖೆಯ ಪರ ವಕೀಲರು, ರಿಟರ್ನ್‌ಗಳನ್ನು ವಿದ್ಯುನ್ಮಾನ ವಿಧಾನದಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ತಂತ್ರಾಂಶವು ಯಾವುದೇ ರಿಟರ್ನ್ ಹಾಲಿ ನ್ಯಾಯಾಧೀಶರಿಗೆ ಸೇರಿದ್ದೇ ಎನ್ನುವುದನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries