ನವದೆಹಲಿ: ಸರಕಾರವು ಆಗಸ್ಟ್ 14ರಿಂದ ಪ್ರಾರಂಭಗೊಂಡ ಹದಿನೈದು ದಿನಗಳ ಅವಧಿಗೆ (ಪಕ್ಷ) ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ವಿಮಾನ ಇಂಧನ (ಎಟಿಎಫ್) ರಫ್ತಿನ ಮೇಲಿನ ವಿಂಡ್‌ಫಾಲ್ ಗೇನ್ಸ್ (ಆಕಸ್ಮಿಕ ಲಾಭ) ತೆರಿಗೆಯನ್ನು ಕಡಿತಗೊಳಿಸಿದೆ.
ಡೀಸೆಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 25.50 ರೂ.ನಿಂದ 24 ರೂ.ಗೆ, ಎಟಿಎಫ್ ರಫ್ತಿನ ಮೇಲಿನ ಸುಂಕವನ್ನು ಪ್ರತಿ ಲೀ.ಗೆ 22 ರೂ.ನಿಂದ 19.50 ರೂ.ಗೆ ಇಳಿಸಲಾಗಿದೆ.
ಆಗಸ್ಟ್ 3 ರಂದು ಪೆಟ್ರೋಲ್ ರಫ್ತಿನ ಮೇಲೆ ವಿಧಿಸಲಾಗಿದ್ದ ಪ್ರತಿ ಲೀ.ಗೆ 3.50 ರೂ.ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಸರಕಾರವು ಮಾರ್ಚ್ 27 ರಂದು ಡೀಸೆಲ್ ಮತ್ತು ಎಟಿಎಫ್ ಮೇಲೆ ರಫ್ತು ಸುಂಕವನ್ನು ವಿಧಿಸಿತ್ತು ಮತ್ತು ಪ್ರತಿ ಹದಿನೈದು ದಿನಗಳಿಗೊಮ್ಮೆ ಸುಂಕ ದರವನ್ನು ಪರಿಷ್ಕರಿಸಿತು. ಮೇ 16ರಿಂದ ಪೆಟ್ರೋಲ್ ರಫ್ತಿನ ಮೇಲೆಯೂ ಈ ಸುಂಕವನ್ನು ವಿಧಿಸಲಾಗಿತ್ತು.
ದೇಶೀಯ ಬಳಕೆಗೆ ಬಿಡುಗಡೆ ಮಾಡಲಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಪ್ರಸ್ತುತ ಸುಂಕದ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ವಿತ್ತ ಸಚಿವಾಲಯವು ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ನಡುವೆ ಇಂಧನದ ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ವಿಂಡ್‌ಫಾಲ್ ತೆರಿಗೆಯನ್ನು ವಿಧಿಸಲಾಗಿತ್ತು.
ಯುದ್ಧ ಪ್ರಾರಂಭವಾದಾಗಿನಿಂದ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿದ್ದರಿಂದ, ರಫ್ತುದಾರರು ಬೆಲೆ ವ್ಯತ್ಯಾಸಗಳ ಅನುಚಿತ ಲಾಭ ಪಡೆಯುವುದನ್ನು ತಡೆಯುವ ಉದ್ದೇಶವನ್ನೂ ಇದು ಹೊಂದಿತ್ತು.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆ ರಫ್ತನ್ನು ಅನುತ್ತೇಜಿಸುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ದೇಶೀಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ವಿಂಡ್‌ಫಾಲ್ ತೆರಿಗೆಯ ಉದ್ದೇಶವಾಗಿತ್ತು.

