ಜಮ್ಮು: ಜೆನ್-ಝೀ ಯುವಸಮುದಾಯದ ಅಸಮಾಧಾನ ಮತ್ತು ಪ್ರತಿಭಟನೆಗಳು ಸಮಂಜಸವಾಗಿದ್ದು, ಹಕ್ಕುಗಳಿಗಾಗಿ ಧ್ವನಿ ಎತ್ತುವುದರಿಂದ ಯಾರೂ ದೇಶದ್ರೋಹಿಗಳಾಗುವುದಿಲ್ಲ ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಸರ್ಕಾರವನ್ನು ವಿರೋಧಿಸುವುದು ಮತ್ತು ದೇಶದ ವಿರುದ್ಧ ಕಾರ್ಯಾಚರಿಸುವುದರ ನಡುವಿನ ವ್ಯತ್ಯಾಸವನ್ನು ಆರ್‌ಎಸ್‌ಎಸ್ ಮುಖ್ಯಸ್ಥರು ಗುರುತಿಸಿರುವುದು ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.
ಸರ್ಕಾರದ ಲೋಪದೋಷಗಳನ್ನು ಗುರುತಿಸುವುದು ದೇಶ ವಿರೋಧಿ ಕೆಲಸವಲ್ಲ, ಬದಲಾಗಿ ಅದು ದೇಶದ ಹಿತದೃಷ್ಟಿಯಿಂದ ಉಪಯುಕ್ತ. ಇದರಿಂದ ಆಡಳಿತದಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಒಮರ್ ಪ್ರತಿಪಾದಿಸಿದ್ದಾರೆ.
ಐಐಎಂಯುಎನ್ (ರಾಷ್ಟ್ರಗಳನ್ನು ಒಂದುಗೂಡಿಸಲು ಭಾರತದ ಅಂತರರಾಷ್ಟ್ರೀಯ ಚಳವಳಿ) ಸಂಘಟನೆಯ 15ನೇ ವಾರ್ಷಿಕೋತ್ಸವ ಅಂಗವಾಗಿ ಸಂವಾದ ಏರ್ಪಡಿಸಲಾಗಿತ್ತು. ಈ ವೇಳೆ 2000ಕ್ಕೂ ಹೆಚ್ಚು ಜೆನ್-ಝೀಗಳು (ಯುವ ಸಮುದಾಯ) ಮತ್ತು ಜೆನ್ ಅಲ್ಫಾ ಸದಸ್ಯರ ಜೊತೆ ಭಾಗವತ್ ಅವರು ಗುರುವಾರ ಸಂವಾದ ನಡೆಸಿದ್ದರು.
ಜೆನ್-ಝೀಗಳು ಪ್ರತಿಭಟನೆ ನಡೆಸಿದರೆ ಅವರನ್ನು ದೇಶದ್ರೋಹಿಗಳು ಎನ್ನಲಾಗದು. ಅವರು ನಮ್ಮದೇ ದೇಶದ ಮುಂದಿನ ಪೀಳಿಗೆ. ಅವರ ಜೊತೆ ನಿರಂತರ ಸಂವಾದ ಮತ್ತು ಸೌಹಾರ್ದಯುತ ಬಾಂಧವ್ಯ ಅಗತ್ಯ ಎಂದು ಮೋಹನ್ ಭಾಗವತ್ ಪ್ರತಿಪಾದಿಸಿದ್ದರು.
ನೀಟ್ ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕೈಗೊಳ್ಳಲಾಗಿರುವ ಪೊಲೀಸ್ ಕ್ರಮಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒಮರ್ ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ಈ ಹೋರಾಟವು ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರಲು ನೆರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಎಳೆದಾಡುವುದು, ಸುಳ್ಳು ಪ್ರಕರಣ ದಾಖಲಿಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡುವುದರ ಜೊತೆಗೆ, ಅವರ ಸಂಬಂಧಿಕರಿಗೂ ಕಿರುಕುಳ ನೀಡಲಾಗುತ್ತಿದೆ ಎಂಬ ವರದಿಗಳಿಗೆ ಕಳವಳ ವ್ಯಕ್ತಪಡಿಸಿದ ಅವರು, ಇಂತಹ ಕ್ರಮಗಳನ್ನು ತಕ್ಷಣವೇ ಕೈಬಿಡಬೇಕು ಎಂದು ಒಮರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ.

