ಮುಂಬೈ (PTI): ವೈಯಕ್ತಿಕ ಸಾಲ, ಕಾರು ಸಾಲ ಅಥವಾ ವಾಹನ ಸಾಲ ಪಡೆದು ಅದನ್ನು ಮರುಪಾವತಿ ಮಾಡದ ಗ್ರಾಹಕರಿಂದ ಸಾಲ ವಸೂಲಿ ಉದ್ದೇಶಕ್ಕಾಗಿ ಅವರ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ಗಳನ್ನು ನಿಷ್ಕ್ರಿಯಗೊಳಿಸಲು ಬ್ಯಾಂಕ್‌ಗಳಿಗೆ ಅವಕಾಶ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗುರುವಾರ ಸ್ಪಷ್ಟಪಡಿಸಿದೆ.
ಆದರೆ, ಆ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ಗೆ ಬ್ಯಾಂಕ್‌ಗಳೇ ಸಾಲ ನೀಡಿದ್ದರೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.
ಸಾಲ ವಸೂಲಿ ಪ್ರಕ್ರಿಯೆಯ ಭಾಗವಾಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷ್ಕ್ರಿಯಗೊಳಿಸಲು ಅವಕಾಶ ಇರುವಲ್ಲಿ, ಆ ಕೆಲಸವನ್ನು ವಿವಿಧ ಹಂತಗಳ ಮೂಲಕ ಮಾಡಬೇಕೇ ವಿನಾ ಆರಂಭದಲ್ಲೇ ಅಂತಹ ಮಾರ್ಗದ ಮೊರೆ ಹೋಗಬಾರದು ಎಂದು ಆರ್‌ಬಿಐ ಹೇಳಿದೆ.
ಸಾಲ ವಸೂಲಿ ಸಂದರ್ಭದಲ್ಲಿ ತಮಗೆ ಕಿರುಕುಳ ನೀಡಲಾಗುತ್ತಿದೆ, ಸಾಮಾಜಿಕ ಜಾಲತಾಣಗಳ ಮೂಲಕ ಕಿರುಕುಳ ನೀಡಲಾಗುತ್ತದೆ ಹಾಗೂ ಬೈಗುಳದ ಭಾಷೆಯನ್ನು ಬಳಸಲಾಗುತ್ತಿದೆ ಎಂದು ಹಲವು ಮಂದಿ ಗ್ರಾಹಕರು ದೂರು ಇತ್ತಿರುವ ಸಂದರ್ಭದಲ್ಲಿ ಆರ್‌ಬಿಐ ಈ ಸೂಚನೆಗಳನ್ನು ನೀಡಿದೆ. ಹೊಸ ನಿಯಮಗಳು 2027ರ ಜನವರಿ 1ರಿಂದ ಅನ್ವಯವಾಗಲಿವೆ.
ಮೊಬೈಲ್ ಫೋನ್ ಖರೀದಿಗೆ ಬ್ಯಾಂಕ್‌ನಿಂದಲೇ ಸಾಲ ಪಡೆದಿದ್ದರೆ ಸಾಲದ ವಸೂಲಿಗೆ ಬ್ಯಾಂಕ್‌ಗಳು ಆ ಮೊಬೈಲ್ ನಿಷ್ಕ್ರಿಯಗೊಳಿಸುವ ಮಾರ್ಗದ ಮೊರೆಹೋಗಬಹುದು. ಆದರೆ ಹಂತ ಹಂತವಾಗಿ ಆ ವಿಧಾನವನ್ನು ಅನುಸರಿಸಬೇಕು, ಆರಂಭದಲ್ಲೇ ಮೊಬೈಲ್ ನಿಷ್ಕ್ರಿಯಗೊಳಿಸಬಾರದು ಎಂದು ತಾಕೀತು ಮಾಡಿದೆ.
ಆದರೆ ಬ್ಯಾಂಕುಗಳು ಮೊಬೈಲ್ ಫೋನ್‌ನ ಅವಶ್ಯಕ ಸೌಕರ್ಯಗಳಾದ ಕರೆ ಸ್ವೀಕರಿಸುವುದು, ಎಸ್‌ಎಂಎಸ್ ಓದುವುದು, ಅಪಾಯಕ್ಕೆ ಸಿಲುಕಿದ ತುರ್ತು ಸಂದರ್ಭಗಳಲ್ಲಿ ಸಂದೇಶ ರವಾನಿಸುವುದನ್ನು ನಿಷ್ಕ್ರಿಯ ಮಾಡಬಾರದು ಎಂದು ಹೇಳಿದೆ.
ಸಾಲ ವಸೂಲಾತಿ ಹಾಗೂ ವಸೂಲಿ ಏಜೆಂಟರ ನೆರವು ಪಡೆಯುವ ಪ್ರಕ್ರಿಯೆಗಳಲ್ಲಿ ನೋಂದಾಯಿತ ಸಂಸ್ಥೆಗಳ ನಡವಳಿಕೆ ಹೇಗಿರಬೇಕು ಎಂಬುದರ ಬಗ್ಗೆ ಆರ್‌ಬಿಐ ಈ ವರ್ಷದ ಮೇ ತಿಂಗಳಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿತ್ತು. ಅದಕ್ಕೆ ಹಲವು ಪ್ರತಿಕ್ರಿಯೆಗಳು ಬಂದಿದ್ದವು.
ಗ್ರಾಹಕ ಅಥವಾ ಸಾಲಕ್ಕೆ ಖಾತರಿದಾರರಿಂದ ಸಾಲ ವಸೂಲಿ ಮಾಡಲು ಎಷ್ಟು ಮಾಹಿತಿ ಅಗತ್ಯವಿದೆಯೋ ಅಷ್ಟನ್ನು ಮಾತ್ರ ಬ್ಯಾಂಕುಗಳು ವಸೂಲಿ ಏಜೆಂಟರಿಗೆ ಅಥವಾ ನೌಕರರಿಗೆ ಒದಗಿಸಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

