ನವದೆಹಲಿ: ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498ಎ ವ್ಯಾಪ್ತಿಯನ್ನು ವಿಸ್ತರಿಸಿ ಸೋಮವಾರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಈ ಸೆಕ್ಷನ್ 'ಸಹಜೀವನ' (ಲಿವ್-ಇನ್) ಸಂಬಂಧದಲ್ಲಿನ ಸಂಗಾತಿಗೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಪತ್ನಿಯ ಮೇಲೆ ಪತಿ ಅಥವಾ ಅವರ ಸಂಬಂಧಿಕರಿಂದಾಗುವ ದೌರ್ಜನ್ಯದ ವಿರುದ್ಧ ಬಳಕೆಯಾಗುತ್ತಿದ್ದ ಈ ಸೆಕ್ಷನ್ ಇನ್ಮುಂದೆ ಲಿವ್-ಇನ್ ಸಂಬಂಧಗಳಲ್ಲಿನ ಸಂಗಾತಿಗಳಿಗೂ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೋಟೀಶ್ವರ್ ಅವರ ನ್ಯಾಯಪೀಠವು, 'ಒಂದು ವೇಳೆ ಲಿವ್-ಇನ್ ಸಂಬಂಧವು 'ಮದುವೆಯ ಸ್ವರೂಪ'ದಲ್ಲಿ ಇದ್ದರೆ, ಸಂಗಾತಿಯ ಮೇಲೆ ಕ್ರೌರ್ಯ ಎಸಗಿದ್ದಕ್ಕಾಗಿ ಆ ಸಂಬಂಧದಲ್ಲಿರುವ ಪುರುಷನನ್ನು ಕಾನೂನು ಕ್ರಮಕ್ಕೆ ಒಳಪಡಿಸಬಹುದು' ಎಂದು ಹೇಳಿದೆ.
'ಮಹಿಳೆಯ ಮೇಲೆ ಕ್ರೌರ್ಯ ಎಸಗಿದ ಆರೋಪದ ಮೇಲೆ ಪ್ರಾಥಮಿಕ ತನಿಖೆ ನಡೆಸದೆ 'ಸಹಜೀವನ' ಸಂಬಂಧದಲ್ಲಿ ಇರುವ ಪುರುಷ ಅಥವಾ ಆತನ ಸಂಬಂಧಿಕರನ್ನು ಬಂಧಿಸುವಂತಿಲ್ಲ' ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
'ಸಂಗಾತಿಯಿಂದ ದೌರ್ಜನ್ಯ ಎದುರಾಗಬಹುದು ಎಂದು ತಿಳಿದು ಅಥವಾ ನಿರೀಕ್ಷಿಸಿ ಯಾರೊಬ್ಬರೂ ಸಂಬಂಧವನ್ನು ಬೆಳೆಸುವುದಿಲ್ಲ' ಎಂದೂ ನ್ಯಾಯಾಲಯ ಹೇಳಿದೆ.
1860ರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅಡಿಯಲ್ಲಿ 'ಸಹಜೀವನ' ಸಂಬಂಧದಲ್ಲಿ ಇರುವ ಪುರುಷರ ವಿರುದ್ಧ ಕಾನೂನು ಕ್ರಮಕ್ಕೆ ಕೈಗೊಳ್ಳಬಹುದೇ ಎಂಬ ಪ್ರಶ್ನೆಯನ್ನು ಹೊಂದಿದ್ದ ಅರ್ಜಿ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ಪ್ರಕಟಿಸಿದೆ.

