ರಾಂಚಿ : ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ನಡೆಸಿರುವ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮ ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೇವೇಂದ್ರ ನಾಥ್ ಮಹತೋ ಅವರೊಂದಿಗೆ ಪರಿಸರ ಹೋರಾಟಗಾರ ಸೊನಮ್ ವಾಂಗ್ಚೂಕ್ ಬುಧವಾರ ಮಾತುಕತೆ ನಡೆಸಿದ್ದು, ಕನಿಷ್ಠ ನೀರನ್ನಾದರೂ ಕುಡಿಯುವಂತೆ ಮನವಿ ಮಾಡಿದ್ದಾರೆ.
ವಾಂಗ್ಚೂಕ್ ಅವರ ಮನವಿಗೆ ಸ್ಪಂದಿಸಿದ ಮಹತೋ, ತಮ್ಮ ನಿರಶನದ ನಾಲ್ಕನೇ ದಿನ ನೀರು ಕುಡಿದಿದ್ದಾರೆ. ಈ ನಡುವೆ, ಜಾರ್ಖಂಡ್ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರತಿಭಟನೆ ತೀವ್ರಗೊಂಡಿದ್ದು, ಮಂಗಳವಾರ ರಾತ್ರಿ 'ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಸುಧಾರಣಾ ಮಂಚ್‌ನ ಮತ್ತೆ ಐವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದರೊಂದಿಗೆ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಿರಶನ ಕುಳಿತವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾದ ಸದಸ್ಯರಾಗಿರುವ ದೇವೇಂದ್ರ ನಾಥ್ ಮಹತೋ ಕಳೆದ ನಾಲ್ಕು ದಿನಗಳಿಂದ ಇದೇ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
ಪ್ರತಿಭಟನಾಕಾರರ ಬೇಡಿಕೆಗಳೇನು?
ಜೆಪಿಎಸ್‌ಸಿ 14ನೇ ಪರೀಕ್ಷೆಯನ್ನು ತಕ್ಷಣ ರದ್ದುಗೊಳಿಸಬೇಕು.
ಪರೀಕ್ಷಾ ಮಂಡಳಿಗಳಲ್ಲಿ ಸುಧಾರಣೆ ತರಬೇಕು.
ಪರೀಕ್ಷಾ ಅಕ್ರಮದ ಕುರಿತು ಸಿಬಿಐಗೆ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಸ್ವತಂತ್ರ ಸಮಿತಿಯಿಂದ ತನಿಖೆ ನಡೆಸಬೇಕು.
ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಹೇಮಂತ್ ಸೊರೇನ್, 'ವಿದ್ಯಾರ್ಥಿಗಳ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದೆ, ಸೂಕ್ತ ಸಮಯದಲ್ಲಿ ಒಳ್ಳೆಯ ನಿರ್ಧಾರ ಪ್ರಕಟಿಸುತ್ತೇವೆ' ಎಂದಿದ್ದಾರೆ. ಇತ್ತ ಪ್ರತಿಭಟನಾಕಾರರು ನಮಗೆ ಬರೀ ಭರವಸೆ ಸಾಲದು, ತಕ್ಷಣದ ನ್ಯಾಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಮಾತನಾಡಿ, ಪ್ರತಿಭಟನಾಕಾರರ ಬೇಡಿಕೆಗಳು ನ್ಯಾಯುವಾಗಿವೆ. ಸರ್ಕಾರ ಜೆಪಿಎಸ್‌ಸಿ 14ನೇ ಪರೀಕ್ಷೆಯನ್ನು ರದ್ದುಗೊಳಿಸಬೇಕು ಮತ್ತು ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಐಡಿ ಪೊಲೀಸರು ಈಗಾಗಲೇ 14 ಜನರನ್ನು ಬಂಧಿಸಿದ್ದಾರೆ. ಜೆಪಿಎಸ್‌ಸಿ ಮಾಜಿ ಅಧ್ಯಕ್ಷ ಎಲ್. ಖಿಯಾಂಗ್ತೆ ಅವರನ್ನು ನಾಲ್ಕು ಬಾರಿ ವಿಚಾರಣೆಗೆ ಒಳಪಡಿಸಿದೆ.

