ಆಗಸ್ಟ್ 15ರಂದು ಭಾರತ ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ. ದೇಶದ ಮೂಲೆ ಮೂಲೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಆದರೆ, ಕೆಲವು ಸ್ಥಳಗಳಲ್ಲಿ ರಾಷ್ಟ್ರ ಧ್ವಜದ ಬದಲಿಗೆ ಬಿಜೆಪಿ ಧ್ವಜ ಹಾರಿಸಲಾಗಿದೆ.
ಪಶ್ಚಿಮಬಂಗಾಳ ಮತ್ತು ಛತ್ತೀಸ್‌ಗಢದ ಎರಡು ವೀಡಿಯೊಗಳಲ್ಲಿ ಬಿಜೆಪಿ ಕಾರ್ಯಕರ್ತರು 'ವಂದೇ ಮಾತರಂ' ಗೀತೆ ಹಾಡುತ್ತಾ, ಗುಲಾಬಿ ದಳಗಳನ್ನು ಎರಚುತ್ತಾ ಪಕ್ಷದ ಧ್ವಜ ಹಾರಿಸುತ್ತಿರುವುದು ಕಂಡು ಬಂದಿದೆ.
ಉತ್ತರಪ್ರದೇಶ ಸರಕಾರದ ಕುರಿತು 'ಯುಪಿ ಮೇ ಕ್ಯಾ ಬಾ' ಎಂಬ ರಾಜಕೀಯ ವ್ಯಂಗ್ಯ ಹಾಡಿಗೆ ಹೆಸರುವಾಸಿಯಾದ ಉತ್ತರಪ್ರದೇಶದ ಜನಪ್ರಿಯ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರು ಈ ವೀಡಿಯೊಗಳಲ್ಲಿ ಒಂದನ್ನು ಹಂಚಿಕೊಂಡಿದ್ದಾರೆ.
''ಬಿಜೆಪಿ ನಾಯಕರು ತ್ರಿವರ್ಣ ಧ್ವಜದ ಬದಲಿಗೆ ಬಿಜೆಪಿ ಧ್ವಜವನ್ನು ಹಾರಿಸಿದರೆ, ಯಾರಾದರೂ ಏನಾದರೂ ಮಾಡಲು ಸಾಧ್ಯವೇ ?'' ಎಂದು ಅವರು ಪ್ರಶ್ನಿಸಿದ್ದಾರೆ.
ಛತ್ತೀಸ್‌ಗಢ ಧಮ್ತಾರಿ ಜಿಲ್ಲೆಯ ಕುರುದ್‌ನಲ್ಲೂ ಇಂತಹದ್ದೇ ದೃಶ್ಯ ಕಂಡು ಬಂದಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ.
ಭಾರತೀಯ ಧ್ವಜ ಸಂಹಿತೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ಕಾಯಿದೆ, 1971ರ ಪ್ರಕಾರ ಸ್ವಾತಂತ್ರ್ಯ ದಿನ ಅಥವಾ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜವನ್ನು ಹೊರತುಪಡಿಸಿ ಬೇರೆ ಯಾವುದೇ ಧ್ವಜವನ್ನು ಹಾರಿಸುವುದು ಅಪಮಾನಕರ ಹಾಗೂ ಅದು ಅಪರಾಧದ ಆರೋಪಗಳಿಗೆ ದಾರಿ ಮಾಡಿ ಕೊಡಬಹುದು.

