HEALTH TIPS

ಸ್ವತ್ತು ಮಾರಾಟದ ವೇಳೆಯೇ ಪೂರ್ಣ ಹಣ ಪಾವತಿ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್‌

ನವದೆಹಲಿ: ಕ್ರಯಪತ್ರವನ್ನು ನೋಂದಾಯಿಸುವ ಸಮಯದಲ್ಲಿ, ಖರೀದಿ ಮಾಡುವ ಸ್ವತ್ತಿನ ಮೌಲ್ಯದ ಸಂಪೂರ್ಣ ಮೊತ್ತವನ್ನು ಪಾವತಿಸಲೇಬೇಕು ಎಂದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.


'ಸ್ವತ್ತನ್ನು ವರ್ಗಾಯಿಸಲು ಪಕ್ಷಗಾರರು ಬಯಸಿದಲ್ಲಿ, ಪಾವತಿಸಬೇಕಾದ ಒಟ್ಟು ಮೊತ್ತದಲ್ಲಿ ಒಂದು ಭಾಗ ಬಾಕಿ ಇದ್ದ ಹೊರತಾಗಿಯೂ, ದಸ್ತಾವೇಜು ನೋಂದಣಿ ಮತ್ತು ಕಾರ್ಯಗತಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿ‌ದ್ದಂತೆಯೇ ಮಾಲೀಕತ್ವದ ವರ್ಗಾವಣೆಯು ಪೂರ್ಣಗೊಳ್ಳುತ್ತದೆ' ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

'ಬಾಕಿ ಮೊತ್ತವನ್ನು ಪಾವತಿಸಿಲ್ಲ ಎಂದ ಮಾತ್ರಕ್ಕೆ ನೋಂದಣಿಯಾದ ಕ್ರಯಪತ್ರ ಅಸಿಂಧುವಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ, ಬಾಕಿ ಮೊತ್ತ ವಸೂಲಿಗಾಗಿ ಮಾರಾಟಗಾರರು ದಾವೆ ಹೂಡಬಹುದೇ ಹೊರತು, ಕ್ರಯಪತ್ರವನ್ನೇ ಅನೂರ್ಜಿತಗೊಳಿಸುವಂತೆ ಕೋರಲು ಬರುವುದಿಲ್ಲ' ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದಚಂದ್ರನ್ ಅವರ ಪೀಠವು ಹೇಳಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಅಮಾನ್ಯಗೊಳಿಸಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ಮತ್ತು ಮೊದಲ ಮೇಲ್ಮನವಿ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ಪ್ರಕರಣ ಏನು?: 1975ರ ಮಾರ್ಚ್ 10ರಂದು ನೋಂದಣಿಯಾದ ಎರಡು ಕ್ರಯಪತ್ರಗಳಿಗೆ ಸಂಬಂಧಿಸಿದ ಮೊಕದ್ದಮೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.

ಅರ್ಜಿದಾರರು ತಲಾ ₹7 ಸಾವಿರಕ್ಕೆ ಎರಡು ಸ್ವತ್ತುಗಳನ್ನು ಪ್ರತಿವಾದಿಗೆ ಮಾರಾಟ ಮಾಡಿ, ಕ್ರಯಪತ್ರ ಮಾಡಿಕೊಟ್ಟಿದ್ದರು. ಆದರೆ, ಕ್ರಯಪತ್ರ ಜಾರಿಗೆ ಬರುವ ಸಂದರ್ಭದಲ್ಲಿ ಖರೀದಿದಾರರು ತಲಾ ₹2,500 ಮಾತ್ರ ಪಾವತಿಸಿ, ಎರಡೂ ಸ್ವತ್ತುಗಳ ತಲಾ ₹4,500 ಬಾಕಿ ಉಳಿಸಿಕೊಂಡಿದ್ದರು. 1976ರಲ್ಲಿ ಮಾಡಿಕೊಂಡ ಒಪ್ಪಂದದಲ್ಲಿ, ಬಾಕಿ ಹಣ ಪಾವತಿಸುವ ಜವಾಬ್ದಾರಿಯನ್ನು ಪ್ರತಿವಾದಿಯು ಒಪ್ಪಿಕೊಂಡಿದ್ದರು.

ಒಪ್ಪಂದವನ್ನು ಪಾಲಿಸಲು ಪ್ರತಿವಾದಿಯು ವಿಫಲರಾದ ಕಾರಣ, 'ಕ್ರಯಪತ್ರವನ್ನು ಅಸಿಂಧು ಎಂದು ಘೋಷಿಸಿ, ಅನೂರ್ಜಿತಗೊಳಿಸಬೇಕು ಹಾಗೂ ಕಾಗದಪತ್ರಗಳನ್ನು ರದ್ದುಗೊಳಿಸಬೇಕು. ನನ್ನನ್ನೇ ಸ್ವತ್ತಿನ ಸಂಪೂರ್ಣ ಹಕ್ಕುದಾರ ಎಂದು ಘೋಷಿಸಬೇಕು. ನನ್ನ ಒಡೆತನದ ಸ್ವತ್ತಿನಲ್ಲಿ ಯಾವುದೇ ರೀತಿ ಹಸ್ತಕ್ಷೇಪ ಮಾಡಬಾರದು ಎಂಬುದಾಗಿ ಪ್ರತಿವಾದಿಗೆ ಶಾಶ್ವತ ಪ್ರತಿಬಂಧಕಾಜ್ಞೆ ನೀಡಬೇಕು' ಎಂದು ವಾದಿಯು 1984ರಲ್ಲಿ ಮೊಕದ್ದಮೆ ದಾಖಲಿಸಿದ್ದರು.

'ಹಣ ‍ಪಾವತಿಸುವುದು ಬಾಕಿ ಇದ್ದ ಹೊರತಾಗಿಯೂ ಮಾರಾಟ ಪ್ರಕ್ರಿಯೆ ಪೂರ್ಣಗೊಂಡಿದೆ. ಸಂಪೂರ್ಣ ಹಣ ಪಾವತಿಯಾದರೆ ಮಾತ್ರ ಊರ್ಜಿತಗೊಳ್ಳುವ ಯಾವುದೇ ಷರತ್ತು ಕ್ರಯಪತ್ರದಲ್ಲಿ ಇಲ್ಲ. ಪ್ರತಿವಾದಿಯು ಬಾಕಿ ಮೊತ್ತವನ್ನು ಪಾವತಿಸುವ ಹೊಣೆಗಾರಿಕೆಯನ್ನು ಮಾತ್ರ ಹೊಂದಿರುತ್ತಾರೆ ಎಂದು ನಂತರದ ಒಪ್ಪಂದಗಳು ದೃಢೀಕರಿಸುತ್ತವೆ' ಎಂದು ವಿಚಾರಣಾ ನ್ಯಾಯಾಲಯವು ಆದೇಶ ನೀಡಿ, ಮೊಕದ್ದಮೆಯನ್ನು ವಜಾಗೊಳಿಸಿತ್ತು. ಮೊದಲ ಮೇಲ್ಮನವಿ ನ್ಯಾಯಾಲಯವೂ ಈ ಆದೇಶವನ್ನು ಎತ್ತಿಹಿಡಿದಿತ್ತು.

ಆದರೆ ಈ ಆದೇಶವನ್ನು ರದ್ದು ಮಾಡಿದ್ದ ಹೈಕೋರ್ಟ್, 'ಪ್ರತಿವಾದಿಯು ಬಾಕಿ ಮೊತ್ತ ಪಾವತಿಸಲು ವಿಫಲರಾದ ಕಾರಣ, ಕ್ರಯಪತ್ರವು ಅನೂರ್ಜಿತಗೊಳ್ಳುತ್ತದೆ' ಎಂದು ತಿಳಿಸಿತ್ತು. ಅಲ್ಲದೆ, ವಾದಿಯನ್ನೇ ಆಸ್ತಿಯ ಮಾಲೀಕ ಎಂದು ಘೋಷಿಸಿ, ಪ್ರತಿವಾದಿ ಪಾವತಿಸಿದ್ದ ₹5 ಸಾವಿರವನ್ನು ಬಡ್ಡಿ ಸಹಿತ ಹಿಂದಿರುಗಿಸುವಂತೆ ಅರ್ಜಿದಾರನಿಗೆ ನಿರ್ದೇಶಿಸಿತ್ತು.

'ಒಟ್ಟು ಮೊತ್ತದ ಒಂದು ಭಾಗವನ್ನು ಮಾತ್ರ ಪಾವತಿಸಲಾಗುತ್ತಿದೆ ಎಂಬ ಸಂಪೂರ್ಣ ಅರಿವಿನೊಂದಿಗೆ ಕ್ರಯಪತ್ರ ಊರ್ಜಿತಕ್ಕೆ ಬಂದಿದೆ. ಹೀಗಾಗಿ, ಹಣ ಪಾವತಿ ಮಾಡದ ಕಾರಣಕ್ಕೆ ಕ್ರಯಪತ್ರವನ್ನು ಅಸಿಂಧು ಅಥವಾ ಅನೂರ್ಜಿತಗೊಳಿಸಲು ಬರುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries