ನವದೆಹಲಿ: 'ಜಂತರ್ ಮಂತರ್‌ನಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಪ್ರತಿಭಟನೆಯು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆ ತಂದಿದೆ' ಎಂದು ಖ್ಯಾತ ಬರಹಗಾರ್ತಿ ಅರುಂಧತಿ ರಾಯ್ ಹೇಳಿದ್ದಾರೆ.
ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದೆ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, ಕೆಲವರಂತೂ 'ವಿಷ್ಣುವಿನ ಅವತಾರ' ಎಂದೇ ಬಿಂಬಿಸುತ್ತಿದ್ದ ಪ್ರಧಾನಿ ಮೋದಿಯವರ 2 ದಶಕಗಳ ಸಾರ್ವಜನಿಕ ಇಮೇಜ್ ಅನ್ನು ಈ ಸಣ್ಣ ಪ್ರತಿಭಟನೆ ಕೇವಲ ಎರಡು ವಾರಗಳಲ್ಲಿ ಹಾಳುಮಾಡಿದೆ ಎಂದು ಹೇಳಿದ್ದಾರೆ.
ಸೋಮವಾರ ತಮ್ಮ 'ಮದರ್ ಮೇರಿ ಕಮ್ಸ್ ಟು ಮೀ' ಪುಸ್ತಕದ ಹಿಂದಿ ಅನುವಾದ 'ಮೇರಿ ಮಾ, ಮೇರಿ ಗ್ಯಾಂಗ್‌ಸ್ಟರ್' ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣಾ ಗೆಲುವು ಮತ್ತು ಸೋಲು ರಾಜಕೀಯದ ಒಂದು ಮಗ್ಗಲಷ್ಟೇ. ಆದರೆ ಇತ್ತೀಚಿನ ಸಾರ್ವಜನಿಕ ಹೋರಾಟವು ದಶಕಗಳ ಇಮೇಜ್ ಅನ್ನು ಕೆಲವೇ ವಾರಗಳಲ್ಲಿ ಅಲುಗಾಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎಂದಿದ್ದಾರೆ.
ಸರ್ಕಾರವು ಆಡಳಿತ ಯಂತ್ರ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡರೆ ಹೋರಾಟ ಕಷ್ಟಕರವಾಗುತ್ತದೆ. ಆದ್ದರಿಂದ ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜ ಒಗ್ಗೂಡಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.
ಜಂತರ್ ಮಂತರ್ ಪ್ರತಿಭಟನಾಕಾರರ ಪಕ್ವತೆಯನ್ನು ಉದಾಹರಿಸಿದ ಅವರು, ಮ್ಯೂಸಿಕಲ್ ಬ್ಯಾಂಡ್‌ನಲ್ಲಿ ಗಿಟಾರ್ ವಾದಕ, ಸಿಂಗರ್, ಡ್ರಮ್ಮರ್ ಎಲ್ಲರೂ ಬೇರೆ ಬೇರೆ ಪಾತ್ರ ವಹಿಸಿದರೂ ಒಂದೇ ಗುರಿಯತ್ತ ಸಾಗುತ್ತಾರೆ. ಅದೇ ರೀತಿ ವಿರೋಧ ಪಕ್ಷಗಳ ಹಿರಿಯ ನಾಯಕರೂ ರಾಜಕೀಯ ಪಕ್ವತೆ ಮೆರೆಯಬೇಕಿದೆ ಎಂದಿದ್ದಾರೆ.
ತಾಯಿಯನ್ನು 'ಗ್ಯಾಂಗ್‌ಸ್ಟರ್' ಎಂದಿದ್ದೇಕೆ?
ತಮ್ಮ ತಾಯಿ ಮೇರಿ ರಾಯ್ ಅವರೊಂದಿಗಿನ ಸಂಬಂಧದ ಬಗ್ಗೆ ಬರೆದಿರುವ ಈ ಪುಸ್ತಕದಲ್ಲಿ ತಾಯಿಯನ್ನು 'ಗ್ಯಾಂಗ್‌ಸ್ಟರ್' ಎಂದು ಕರೆದಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡಿದ ಅವರು, 'ನನ್ನ ಮೇಲೆ ಯಾರಾದರೂ ದಾಳಿ ಮಾಡಿದಾಗಲೆಲ್ಲಾ, 'ನಾನು ಯಾರ ಮಗಳು ಗೊತ್ತಾ?' ಎಂದುಕೊಳ್ಳುವ ಧೈರ್ಯ ನನಗಿದೆ. ನನ್ನ ತಾಯಿ ನಿಜಕ್ಕೂ ಒಬ್ಬ ಗ್ಯಾಂಗ್‌ಸ್ಟರ್ ತರಹವೇ ಧೈರ್ಯಶಾಲಿಯಾಗಿದ್ದರು ಎಂದಿದ್ದಾರೆ.
ಬರವಣಿಗೆಯ ಉದ್ದೇಶ:
ತಮಗೆ ಸಿಕ್ಕ ಯಶಸ್ಸು ಮತ್ತು ಪ್ರಶಸ್ತಿಗಳ ಕುರಿತು ಮಾತನಾಡಿದ ರಾಯ್, ಜನ ನನ್ನನ್ನು ಯಶಸ್ವಿ ಬರಹಗಾರ್ತಿ ಎನ್ನಬಹುದು ಮತ್ತು ಪ್ರಶಸ್ತಿಗಳನ್ನು ನೀಡಬಹುದು. ಆದರೆ ಜಗತ್ತಿನ ಯಾವುದೋ ಮೂಲೆಯಲ್ಲಿ (ಗಾಜಾದಲ್ಲಿ, ಹಳ್ಳಿಯಲ್ಲಿ ಅಥವಾ ದಾರಿಯಲ್ಲಿ) ಬಡವರು ಮತ್ತು ಅಮಾಯಕರು ದೌರ್ಜನ್ಯ ಅನುಭವಿಸುತ್ತಿದ್ದಾರೆ. ಅವರ ಪರ ಧ್ವನಿ ಎತ್ತುವುದು ಮತ್ತು ಅವರ ನೋವನ್ನು ಪ್ರಪಂಚಕ್ಕೆ ತೋರಿಸುವುದೇ ನನ್ನ ಬರವಣಿಗೆಯ ಮುಖ್ಯ ಉದ್ದೇಶ ಎಂದಿದ್ದಾರೆ.
'ಮೇರಿ ಮಾ, ಮೇರಿ ಗ್ಯಾಂಗ್‌ಸ್ಟರ್' ಪುಸ್ತಕವು ಈಗಾಗಲೇ 40ಕ್ಕೂ ಹೆಚ್ಚು ಜಾಗತಿಕ ಭಾಷೆಗಳಿಗೆ ಅನುವಾದಗೊಂಡಿದೆ.

