ಟೆಹರಾನ್: 'ಇರಾನ್ ಬಂದರಿನ ಮೇಲೆ ಹೇರಿರುವ ದಿಗ್ಬಂಧನ ತೆರವುಗೊಳಿಸುವುದೂ ಸೇರಿದಂತೆ ನಾವು ಮುಂದಿಟ್ಟಿರುವ ಬೇಡಿಕೆಗಳನ್ನು ಅಮೆರಿಕವು ಈಡೇರಿಸುವವರೆಗೆ ಹೊರ್ಮುಜ್ ಜಲಸಂಧಿಯನ್ನು ತೆರೆಯುವ ಪ್ರಶ್ನೆಯೇ ಇಲ್ಲ' ಎಂದು ಇರಾನ್ ಸಂಸತ್‌ನ ಸ್ಪೀಕರ್ ಮತ್ತು ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಖಿರ್ ಖಾಲೀಬಾಫ್ ಹೇಳಿದ್ದಾರೆ.
ಜೂನ್‌ನಲ್ಲಿ ಮಾಡಿಕೊಳ್ಳಲಾದ ಮಧ್ಯಂತರ ಕದನ ವಿರಾಮ ಒಪ್ಪಂದದ ಪ್ರಕಾರ, ಅಮೆರಿಕವು ಇರಾನ್‌ನ ಬೇಡಿಕೆಗಳನ್ನು ಈಡೇರಿಸಬೇಕು. ವಿದೇಶಗಳಲ್ಲಿರುವ ಇರಾನ್ ಆಸ್ತಿಗಳ ಮೇಲೆ ಮತ್ತು ತೈಲ ವ್ಯಾಪಾರದ ಮೇಲೆ ಹೇರಿರುವ ನಿರ್ಬಂಧವನ್ನು ವಾಪಸ್ ಪಡೆಯಬೇಕು' ಎಂದು ಖಾಲೀಬಾಫ್ ಹೇಳಿರುವುದನ್ನು ಇರಾನ್ ಟಿವಿ ಪ್ರಸಾರ ಮಾಡಿದೆ.
'ಹೊರ್ಮುಜ್ ವಿಷಯದಲ್ಲಿ ಇರಾನ್ ಜತೆಗೆ ಕೈಜೋಡಿಸಿದರೆ ಬಾಂಬ್ ಹಾಕುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಒಮಾನ್‌ಗೆ ಎಚ್ಚರಿಕೆ ನೀಡಿದ್ದರು ಹಾಗೂ ಶರಣಾಗುವಂತೆ ಇರಾನ್‌ಗೆ ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಖಾಲೀಬಾಫ್, 'ಶತ್ರುವಿಗೆ ಇನ್ನೂ ಭೀಕರವಾದ ಸೋಲುಣಿಸಲು ಇರಾನ್ ಸಿದ್ಧವಿದೆ' ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡುವ ಮೂಲಕ ಫೆಬ್ರುವರಿ 28ರಂದು ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾಗಿತ್ತು. ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಏಪ್ರಿಲ್ 8ರಿಂದ ರಾಜತಾಂತ್ರಿಕ ಪ್ರಯತ್ನಗಳು ನಡೆದಿದ್ದವು. ಆದರೆ, ಹೊರ್ಮುಜ್ ಜಲಸಂಧಿ ಮೇಲಿನ ನಿಯಂತ್ರಣದ ವಿಚಾರದಲ್ಲಿ ಒಮ್ಮತ ಮೂಡದ್ದರಿಂದ ಇರಾನ್-ಅಮೆರಿಕ ನಡುವಿನ ಬಿಕ್ಕಟ್ಟು ತೀವ್ರಗೊಂಡಿತ್ತು. ಸಂಧಾನಕಾರರ ಪ್ರಯತ್ನದ ಭಾಗವಾಗಿ ಜೂನ್‌ನಲ್ಲಿ ಉಭಯ ದೇಶಗಳ ನಡುವೆ ಮಧ್ಯಂತರ ಕದನ ವಿರಾಮ ಏರ್ಪಟ್ಟಿತ್ತು. ಎರಡು ತಿಂಗಳ ಈ ಒಪ್ಪಂದವು ಆಗಸ್ಟ್ 17ರಂದು ಮುಗಿದಿದ್ದು, ಮತ್ತೆ ಅಸ್ಥಿರತೆ ಕಾಣಿಸಿಕೊಂಡಿದೆ.

