ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶೋಚನೀಯಾವಸ್ಥೆ, ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಬೇಕೆಂದು ಆಗ್ರಹಿಸಿ ಸಮಾಜಸೇವಕ ಮೆಹಮೂದ್ ಕೈಕಂಬ ಆಸ್ಪತ್ರೆ ಮುಂಭಾಗದಲ್ಲಿ ಜನಪರ ಸಹಕಾರದೊಂದಿಗೆ ಅನಿರ್ದಿಷ್ಟ ಕಾಲ ಉಪವಾಸ ಮುಷ್ಕರ ನಡೆಸುವ ಸಿದ್ಧತೆಯಲ್ಲಿದ್ದಾರೆ.
ದಿನನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ತಲುಪುವ ಈ ಆಸ್ಪತ್ರೆಯಲ್ಲಿ ವೈದ್ಯರುಗಳು ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ಮಂಗಲ್ಪಾಡಿ ತಾಲೂಕಿನ ವಿವಿಧ ಭಾಗಗಳಿಂದ ಹಾಗೂ ಒಳ ಪ್ರದೇಶಗಳಿಂದ ತಲುಪುವ ಬಡ ರೋಗಿಗಳು ಗಂಟೆಗಳ ಕಾಲ ಕಾದು ನಿಂತರೂ ಚಿಕಿತ್ಸೆ ಲಭಿಸದೆ ಹಿಂತಿರುಗಬೇಕಾಗುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸಂದಣಿ ಹೆಚ್ಚುತ್ತಿದ್ದು, ಹೆಚ್ಚಿನ ದಿನಗಳಲ್ಲಿ ಒಪಿ ವಿಭಾಗದಲ್ಲೂ ಅಗತ್ಯಕ್ಕೆ ವೈದ್ಯರುಗಳು ಇಲ್ಲದ ಅವಸ್ಥೆ ಇದೆ. ರೋಗಿಗಳ ಈ ಸಂಕಷ್ಟದ ವಿರುದ್ಧ ಸ್ಥಳೀಯರು, ವಿವಿಧ ಜನಪರ ಒಕ್ಕೂಟಗಳು ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿದ್ದಾರೆ.
ಈ ವಿಷಯದಲ್ಲಿ ಆರೋಗ್ಯ ಇಲಾಖೆ, ಜನಪ್ರತಿನಿಧಿಗಳು ತುರ್ತಾಗಿ ಮಧ್ಯೆ ಪ್ರವೇಶಿಸಿ ಅಗತ್ಯದ ವೈದ್ಯರನ್ನು ನೇಮಕಗೊಳಿಸಬೇಕು, ಆಸ್ಪತ್ರೆಯ ದೈನಂದಿನ ಚಟುವಟಿಕೆಗಳನ್ನು ಸುಗಮಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಲ್ಲಿ 9 ಮಂದಿ ವೈದ್ಯರು ಇರಬೇಕಾಗಿದ್ದು, ಅದರಲ್ಲಿ 5 ಮಂದಿ ಮಾತ್ರವೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಚಟುವಟಿಕೆಯನ್ನು ಉತ್ತಮಪಡಿಸಬೇಕೆಂದು ಆಗ್ರಹಿಸಿ ಮೆಹಮ್ಮೂದ್ ಕೈಕಂಬ ಪ್ರತಿಭಟನೆಗೆ ಮುಂದಾಗಿದ್ದಾರೆ.



