ಲಾಹೋರ್ (PTI): ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯಾ ನಡುವೆ ಏರ್ಪಟ್ಟಿರುವ ತ್ರಿಪಕ್ಷೀಯ ರಕ್ಷಣಾ ಒಪ್ಪಂದದಿಂದ ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಪ್ರಾಬಲ್ಯ ಗಣನೀಯವಾಗಿ ತಗ್ಗುವ ಸಾಧ್ಯತೆಯಿದೆ ಎಂದು ಪಾಕಿಸ್ತಾನ ಮೂಲದ ಕೆಲ ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭದ್ರತಾ ಕಳವಳಗಳ ನಡುವೆಯೇ ಈ ಮೂರು ದೇಶಗಳು ಶುಕ್ರವಾರ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ.ಒಪ್ಪಂದದ ಪ್ರಕಾರ, ಈ ಮೂರು ದೇಶ ಗಳ ಪೈಕಿ ಯಾವುದರ ಮೇಲಾ ದರೂ ದಾಳಿಯಾದರೆ ಅದು ಎಲ್ಲರ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ.
'ಪಶ್ಚಿಮ ಏಷ್ಯಾದಲ್ಲಿನ ತನ್ನ ಮಿತ್ರ ದೇಶಗಳಿಗೆ ಭದ್ರತಾ ಭರವಸೆ ನೀಡುವ ವಿಚಾರದಲ್ಲಿ ಅಮೆರಿಕದ ಸಾಮರ್ಥ್ಯದ ಬಗ್ಗೆ ಕೊಲ್ಲಿ ದೇಶಗಳಲ್ಲಿ ಅನುಮಾನ ಹೆಚ್ಚುತ್ತಿದೆ. ಆ ಕಾರಣದಿಂದ ಈ ಒಪ್ಪಂದ ಏರ್ಪಟ್ಟಿದೆ' ಎಂದು ಪಾಕ್‌ನ ರಕ್ಷಣಾ ತಜ್ಞ ಅಬ್ಲುಲ್ಲಾ ಹಮೀದ್ ಗುಲ್ ವಿಶ್ಲೇಷಿಸಿದ್ದಾರೆ. ಗುಲ್ ಅವರು ಐಎಸ್‌ಐನ ಮಾಜಿ ಮುಖ್ಯಸ್ಥರೊಬ್ಬರ ಪುತ್ರ.
'ಕೊಲ್ಲಿ ದೇಶಗಳಲ್ಲಿ ಅಮೆರಿಕದ 27 ಸೇನಾ ನೆಲೆಗಳು ಇದ್ದವು. ಈ ಪೈಕಿ 17 ನೆಲೆಗಳನ್ನು ಇರಾನ್ ದೇಶವು ಅಮೆರಿಕದ ಜತೆಗಿನ ಸಂಘರ್ಷದ ಸಂದರ್ಭದಲ್ಲಿ ನಾಶ ಪಡಿಸಿದೆ. ಇದರಿಂದಾಗಿ, ಅಮೆರಿಕನ್ನರು ತಮ್ಮನ್ನು ರಕ್ಷಿಸಬಲ್ಲರೇ ಎಂಬ ಪ್ರಶ್ನೆ ಕೊಲ್ಲಿ ಭಾಗದ ಜನರಲ್ಲಿ ಮೂಡಿದೆ. ಅದು ಇಂತಹ ಒಪ್ಪಂದಕ್ಕೆ ಕಾರಣವಾಗಿದೆ' ಎಂದು ಅವರು ವಿವರಿಸಿದ್ದಾರೆ.
ಕತಾರ್ ಮತ್ತು ಕುವೈತ್ ಕೂಡ ಶೀಘ್ರವೇ ಪಾಕಿಸ್ತಾನದ ಜತೆ ಇದೇ ರೀತಿಯ ಒಪ್ಪಂದ ಮಾಡಿಕೊಳ್ಳಲಿವೆ ಎಂದಿರುವ ಅವರು, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಸ್ಥಾನಮಾನ ಬದಲಾಗಿರುವುದನ್ನು ಇದು ಸೂಚಿಸುತ್ತದೆ ಎಂದಿದ್ದಾರೆ.
ಭವಿಷ್ಯದಲ್ಲಿ ಭಾರತ- ಪಾಕಿಸ್ತಾನದ ನಡುವೆ ಸಂಘರ್ಷವೇನಾದರೂ ಏರ್ಪಟ್ಟರೆ ಅದನ್ನು ತಡೆಯುವ ಶಕ್ತಿಯಾಗಿ ಪಾಕ್, ಟರ್ಕಿ, ಸೌದಿ ನಡುವಿನ ರಕ್ಷಣಾ ಒಪ್ಪಂದ ಕಾರ್ಯ ನಿರ್ವಹಿ ಸಬಹುದು ಎಂದು ನಿವೃತ್ತ ಬ್ರಿಗೇಡಿಯರ್ ಫಾರೂಕ್ ಹಮೀದ್ ಹೇಳಿದ್ದಾರೆ.

