ನವದೆಹಲಿ: BJP ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನೆಯಲ್ಲಿ ಮೊದಲ ಪ್ರಮುಖ ಪುನರ್ರಚನೆ ನಡೆದಿದೆ. ಸೋಮವಾರ (ಆ.17) ಪಕ್ಷವು ರಾಷ್ಟ್ರೀಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಸೇರಿದಂತೆ ಹಲವು ಪ್ರಮುಖ ಹುದ್ದೆಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಿಸಿದೆ.
ನೇಮಕಗೊಂಡವರ ಪಟ್ಟಿಯನ್ನು ಗಮನಿಸಿದರೆ ಪ್ರಮುಖ ಹುದ್ದೆಗಳಲ್ಲಿ ಮೇಲ್ಜಾತಿಯ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. OBC, SC, ST ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ನಾಯಕರ ಸಂಖ್ಯೆ ಕಡಿಮೆ ಇದೆ.
►13 ಉಪಾಧ್ಯಕ್ಷರಲ್ಲಿ ಇಬ್ಬರು ಮಾತ್ರ OBC
BJP ನೇಮಿಸಿರುವ 13 ರಾಷ್ಟ್ರೀಯ ಉಪಾಧ್ಯಕ್ಷರ ಪೈಕಿ ಉತ್ತರ ಪ್ರದೇಶದ ಧೌರಾಹ್ರಾ ಕ್ಷೇತ್ರದ ಎರಡು ಬಾರಿ ಸಂಸದರಾಗಿದ್ದ ರೇಖಾ ವರ್ಮಾ ಮತ್ತು ಕರ್ನಾಟಕದ ಹಾಲಿ ರಾಜ್ಯಸಭಾ ಸದಸ್ಯ ಎಂ. ನಾಗರಾಜ್ ಅವರು ಮಾತ್ರ OBC ಸಮುದಾಯಕ್ಕೆ ಸೇರಿದವರು.
SC ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಲಾಲ್ ಸಿಂಗ್ ಆರ್ಯ ಅವರು ಉಪಾಧ್ಯಕ್ಷರ ಪಟ್ಟಿಯಲ್ಲಿರುವ ಏಕೈಕ ದಲಿತ ನಾಯಕ. ಕೇಂದ್ರದ ಮಾಜಿ ಸಚಿವೆ ಭಾರ್ತಿ ಪ್ರವೀಣ್ ಪವಾರ್ ಅವರು ಪಟ್ಟಿಯಲ್ಲಿರುವ ಏಕೈಕ ST ನಾಯಕಿ.
ಲಾಲ್ ಸಿಂಗ್ ಆರ್ಯ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದ ಬಳಿಕ ಬಿಹಾರದ ಮಾಜಿ ಶಾಸಕ ಶಿವೇಶ್ ಕುಮಾರ್ ರಾಮ್ ಅವರನ್ನು BJP SC ಮೋರ್ಚಾದ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ BJP ಗೆದ್ದ ಬಳಿಕ ರಾಜೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೆ, ಮೊದಲ ಬಾರಿಗೆ ಶಾಸಕರಾದ ಭಜನ್ ಲಾಲ್ ಶರ್ಮಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರನ್ನೂ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಮನ್ಪ್ರೀತ್ ಸಿಂಗ್ ಬಾದಲ್ ಅವರು ಪಟ್ಟಿಯಲ್ಲಿರುವ ಏಕೈಕ ಸಿಖ್ ನಾಯಕ. ಅಲಿಘರ್ ಮುಸ್ಲಿಂ ವಿವಿ(AMU)ಯ ಮಾಜಿ ಕುಲಪತಿ ಮತ್ತು ಉತ್ತರ ಪ್ರದೇಶ ವಿಧಾನ ಪರಿಷತ್ ಸದಸ್ಯ ಪ್ರೊ. ತಾರಿಕ್ ಮನ್ಸೂರ್ ಅವರು ಏಕೈಕ ಮುಸ್ಲಿಂ ಉಪಾಧ್ಯಕ್ಷರಾಗಿದ್ದಾರೆ.
ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ BJP ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮ್ ಮಾಧವ್ ಅವರನ್ನು ಇದೀಗ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. BJDಯ ಮಾಜಿ ನಾಯಕ ಬೈಜಯಂತ್ ಜೇ ಪಾಂಡಾ ಅವರು ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದಾರೆ.
►8 ಪ್ರಧಾನ ಕಾರ್ಯದರ್ಶಿಗಳಲ್ಲಿ 6 ಮಂದಿ ಮೇಲ್ಜಾತಿಯವರು
BJP ನೇಮಿಸಿರುವ ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪೈಕಿ ಆರು ಮಂದಿ ಮೇಲ್ಜಾತಿಗೆ ಸೇರಿದವರು.
ರಾಜಸ್ಥಾನದ ಜಾಟ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸತೀಶ್ ಪೂನಿಯಾ ಅವರು ಪಟ್ಟಿಯಲ್ಲಿರುವ ಏಕೈಕ OBC ನಾಯಕ. ಅವರು ಈ ಹಿಂದೆ ಹರಿಯಾಣದ BJP ಉಸ್ತುವಾರಿಯಾಗಿದ್ದರು. ಮಂಗಳವಾರ ಅವರನ್ನು ಚುನಾವಣೆ ನಡೆಯಲಿರುವ ಪಂಜಾಬ್ ನ ಪಕ್ಷದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ರಾಜಸ್ಥಾನದ ಜಾಟ್ ಗಳು ರಾಜ್ಯದ OBC ಪಟ್ಟಿಯಲ್ಲಿದ್ದರೂ, ಕೇಂದ್ರದ OBC ಪಟ್ಟಿಯಲ್ಲಿ ಅವರಿಗೆ ಸ್ಥಾನವಿಲ್ಲ. ಹರಿಯಾಣ ಮತ್ತು ಉತ್ತರ ಪ್ರದೇಶದ ಜಾಟ್ ಗಳು ಕೂಡ OBC ವರ್ಗಕ್ಕೆ ಸೇರುವುದಿಲ್ಲ.
ಮಧ್ಯಪ್ರದೇಶದ ಖಾರ್ಗೋನ್ ಲೋಕಸಭಾ ಕ್ಷೇತ್ರದ ಸಂಸದ ಗಜೇಂದ್ರ ಪಟೇಲ್ ಅವರು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಲ್ಲಿರುವ ಏಕೈಕ ST ನಾಯಕ.
ತ್ರಿಪುರದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್, ರಾಜ್ಯಸಭಾ ಸದಸ್ಯ ವಿನೋದ್ ತಾವ್ಡೆ, ಸುನಿಲ್ ಬನ್ಸಾಲ್, ಹರೀಶ್ ದ್ವಿವೇದಿ ಮತ್ತು ಸಂಜಯ್ ಭಾಟಿಯಾ ಸೇರಿದಂತೆ ಹಲವು ನಾಯಕರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.
ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಕೂಡ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ ಸೋತ ಬಳಿಕ ಇರಾನಿ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿ ಕಾಣಿಸಿಕೊಂಡಿರಲಿಲ್ಲ.
ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪೈಕಿ ವಿನೋದ್ ತಾವ್ಡೆ ಮತ್ತು ಸುನಿಲ್ ಬನ್ಸಾಲ್ ಅವರನ್ನು ಮಾತ್ರ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಉಳಿದ ಆರು ಮಂದಿಯನ್ನು ಈ ಹುದ್ದೆಗೆ ಹೊಸದಾಗಿ ನೇಮಿಸಲಾಗಿದೆ. ತಾವ್ಡೆ ಅವರನ್ನು ಉತ್ತರ ಪ್ರದೇಶದ BJP ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಜಗದೀಶ್ ಈಶ್ವರಭಾಯಿ ಪಟೇಲ್ ಅವರನ್ನು ಉತ್ತರ ಪ್ರದೇಶದ ಸಹ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
►ಪಿಯೂಷ್ ಗೋಯಲ್ಗೆ ಖಜಾಂಚಿ ಹುದ್ದೆ
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು BJPಯ ಖಜಾಂಚಿಯನ್ನಾಗಿ ನೇಮಿಸಲಾಗಿದೆ. ಅವರ ತಂದೆ ವೇದ್ ಪ್ರಕಾಶ್ ಗೋಯಲ್ ಕೂಡ ಎರಡು ದಶಕಗಳಿಗೂ ಹೆಚ್ಚು ಕಾಲ ಪಕ್ಷದ ಖಜಾಂಚಿಯಾಗಿದ್ದರು. ಅವರು ಕೇಂದ್ರ ಸಚಿವರೂ ಆಗಿದ್ದರು.
ಪಿಯೂಷ್ ಗೋಯಲ್ ಪ್ರಸ್ತುತ ಕೇಂದ್ರ ವಾಣಿಜ್ಯ ಸಚಿವರಾಗಿದ್ದಾರೆ. ಅವರಿಗೆ ಪಕ್ಷದ ಖಜಾಂಚಿ ಹುದ್ದೆ ನೀಡಿರುವುದು ಮುಂದಿನ ಸಚಿವ ಸಂಪುಟ ಪುನರ್ರಚನೆಯಲ್ಲಿ ಅವರ ಸಚಿವಾಲಯ ಬದಲಾಗುವ ಅಥವಾ ಸಚಿವ ಸ್ಥಾನದಿಂದ ಅವರನ್ನು ಕೈಬಿಡುವ ಸಾಧ್ಯತೆಯ ಸೂಚನೆಯಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
►ಬಿ.ಎಲ್. ಸಂತೋಷ್ ಮುಂದುವರಿಕೆ
BJP ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಬಿ.ಎಲ್. ಸಂತೋಷ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲಿ ಮುಂದುವರಿಸಿದ್ದಾರೆ. BJP ಮತ್ತು RSS ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿ ಈ ಹುದ್ದೆ ಕಾರ್ಯನಿರ್ವಹಿಸುತ್ತದೆ. ಶಿವಪ್ರಕಾಶ್ ಮತ್ತು ಸೌದನ್ ಸಿಂಗ್ ಅವರು ಜಂಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು (ಸಂಘಟನೆ) ಆಗಿ ಕಾರ್ಯನಿರ್ವಹಿಸಲಿದ್ದಾರೆ.
►16 ರಾಷ್ಟ್ರೀಯ ಕಾರ್ಯದರ್ಶಿಗಳು
BJP 16 ರಾಷ್ಟ್ರೀಯ ಕಾರ್ಯದರ್ಶಿಗಳನ್ನೂ ನೇಮಿಸಿದೆ. ಕೇರಳ BJPಯ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್ ಮತ್ತು ಕಾಂಗ್ರೆಸ್ ನ ಮಾಜಿ ಕೇಂದ್ರ ಸಚಿವ ಎ.ಕೆ. ಆಂಟನಿ ಅವರ ಪುತ್ರ ಅನಿಲ್ ಆಂಟನಿ ಪ್ರಮುಖರು.
ಹೊಸ ಪದಾಧಿಕಾರಿಗಳ ಪಟ್ಟಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ನಾಲ್ಕು ಹೆಸರುಗಳಿವೆ. ಮನ್ಪ್ರೀತ್ ಸಿಂಗ್ ಬಾದಲ್, ತಾರಿಕ್ ಮನ್ಸೂರ್, ಅನಿಲ್ ಆಂಟನಿ ಮತ್ತು BJP ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ನೇಮಕಗೊಂಡ ಕುನ್ವರ್ ಬಸಿತ್ ಅಲಿ ಅವರು ಈ ನಾಲ್ವರು.
AAPಯಿಂದ BJPಗೆ ಬಂದ ರಾಜ್ಯಸಭಾ ಸದಸ್ಯ ಸಂದೀಪ್ ಪಾಠಕ್ ಮತ್ತು ಉತ್ತರ ಪ್ರದೇಶದ ಚೌರಿ ಚೌರಾ ಕ್ಷೇತ್ರದ ಮಾಜಿ ಶಾಸಕಿ ಸಂಗೀತಾ ಯಾದವ್ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.
ಲೋಕಸಭಾ ಸದಸ್ಯ ಸಂಬಿತ್ ಪಾತ್ರ ಅವರನ್ನು ಈಶಾನ್ಯ ರಾಜ್ಯಗಳ ಪಕ್ಷದ ಸಂಯೋಜಕರನ್ನಾಗಿ ಮತ್ತು ತರುಣ್ ಚುಗ್ ಅವರನ್ನು ಕಚೇರಿ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಚುಗ್ ಅವರನ್ನು ಗುಜರಾತ್ನ BJP ಉಸ್ತುವಾರಿಯನ್ನಾಗಿಯೂ ನೇಮಿಸಲಾಗಿದೆ.
►ಐಟಿ ಸೆಲ್ನಲ್ಲೂ ಬದಲಾವಣೆ
BJP ಸಾಮಾಜಿಕ ಮಾಧ್ಯಮ ಸಂಚಾಲಕರಾಗಿ ಅಮಿತ್ ಮಾಳವೀಯ ಅವರ ಬದಲಿಗೆ ದೀಪಕ್ ಮಾಸ್ಕಿ ಅವರನ್ನು ನೇಮಿಸಲಾಗಿದೆ. ಮಾಳವೀಯ ಅವರು BJP ಐಟಿ ಸೆಲ್ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಸುಳ್ಳು ನಿರೂಪಣೆಗಳನ್ನು ಪ್ರಚಾರ ಮಾಡುತ್ತಿದ್ದಾರೆ ಮತ್ತು ಜನರನ್ನು ಟ್ರೋಲ್ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಮತ್ತು ಕಾರ್ಯಕರ್ತರು ಆರೋಪಿಸಿದ್ದರು.
ಮಾಸ್ಕಿ ಅವರ ನೇಮಕದ ಜತೆಗೆ ನಾಲ್ವರು ಸಾಮಾಜಿಕ ಮಾಧ್ಯಮ ಸಹ ಸಂಚಾಲಕರನ್ನೂ ನೇಮಿಸಲಾಗಿದೆ. ಅವರಲ್ಲಿ ಅರುಣ್ ಯಾದವ್ ಕೂಡ ಒಬ್ಬರು. ಅವರು ಈ ಹಿಂದೆ ಹರಿಯಾಣ BJP ಐಟಿ ಸೆಲ್ ಉಸ್ತುವಾರಿ ವಹಿಸಿದ್ದರು.
ಇಸ್ಲಾಂ ವಿರುದ್ಧದ ಹಳೆಯ ಟ್ವೀಟ್ಗಾಗಿ 2022ರ ಜುಲೈನಲ್ಲಿ ಅರುಣ್ ಯಾದವ್ ಅವರನ್ನು ಆ ಹುದ್ದೆಯಿಂದ ತೆಗೆದುಹಾಕಲಾಗಿತ್ತು. BJPಯ ಆಗಿನ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಂದ ಉಂಟಾದ ಕೋಲಾಹಲದ ನಡುವೆಯೇ ಈ ಕ್ರಮ ಕೈಗೊಳ್ಳಲಾಗಿತ್ತು.
BJYMಗೆ ಹೊಸ ಅಧ್ಯಕ್ಷ
ಗುಜರಾತ್ನ ವಡೋದರದ 35 ವರ್ಷದ ಲೋಕಸಭಾ ಸದಸ್ಯ ಹೇಮಾಂಗ್ ಜೋಶಿ ಅವರನ್ನು BJPಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ (BJYM) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರ ಸ್ಥಾನವನ್ನು ಜೋಶಿ ತುಂಬಲಿದ್ದಾರೆ.
ಹೇಮಾಂಗ್ ಜೋಶಿ ಅವರಿಗೆ 35 ವರ್ಷ ವಯಸ್ಸಾಗಿರುವುದರಿಂದ, ಅವರ ನೇಮಕವನ್ನು BJP ಕಿರಿಯ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರ ಸಂಕೇತ ಎಂದು ಹೇಳಲು ಸಾಧ್ಯವಿಲ್ಲ. ಹಿಂದಿನ ಅಧ್ಯಕ್ಷರಾಗಿದ್ದ ತೇಜಸ್ವಿ ಸೂರ್ಯ ಅವರಿಗೂ 30ರ ಹರೆಯದಲ್ಲೇ BJYM ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
BJPಯಲ್ಲಿ ಇವರಿಗಿಂತಲೂ ಕಿರಿಯ ಸಂಸದರು ಇದ್ದಾರೆ. ಸಂಜನಾ ಜಾತವ್, ಪುಷ್ಪೇಂದ್ರ ಸರೋಜ್, ಪ್ರಿಯಾ ಸರೋಜ್ ಮತ್ತು ಶಾಂಭವಿ ಚೌಧರಿ ಅವರು 20ರ ಹರೆಯದ ಆಸುಪಾಸಿನಲ್ಲಿರುವ ಹಾಲಿ ಲೋಕಸಭಾ ಸದಸ್ಯರು.

