ನವದೆಹಲಿ: ಮುಂದಿನ ತಿಂಗಳು ಆರಂಭವಾಗಲಿರುವ ಜನಗಣತಿಯ ಜನಸಂಖ್ಯೆ ಎಣಿಕೆ ಹಂತದಲ್ಲಿ 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.
2020ರಲ್ಲಿ NPRಗಾಗಿ ಸಿದ್ಧಪಡಿಸಿದ್ದ ಪ್ರಶ್ನಾವಳಿಯಲ್ಲೂ ಈ ಪೈಕಿ ಕೆಲವು ಪ್ರಶ್ನೆಗಳು ಇದ್ದವು.
ವ್ಯಕ್ತಿಯ ತಂದೆ-ತಾಯಿ ಹಾಗೂ ಅವರ ಜನ್ಮಸ್ಥಳದ ವಿವರಗಳನ್ನು ಕೇಳುವ ಪ್ರಶ್ನೆಗಳೂ ಇದರಲ್ಲಿ ಸೇರಿದ್ದು, NPR ಮೂಲಕ ಮುಂದೆ ದೇಶವ್ಯಾಪಿ NRC ನಡೆಸಲು ಸರಕಾರ ಸಿದ್ಧತೆ ನಡೆಸುತ್ತಿದೆ ಎಂಬ ಆತಂಕವನ್ನು ವಿರೋಧ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ವ್ಯಕ್ತಪಡಿಸಿದ್ದವು. ಈ ಕಾರಣಕ್ಕೆ ಆ ಪ್ರಶ್ನೆಗಳು 2019-20ರಲ್ಲಿ ವಿವಾದಕ್ಕೆ ಕಾರಣವಾಗಿದ್ದವು.
ಭಾರತದ ರಿಜಿಸ್ಟ್ರಾರ್ ಜನರಲ್ (RGI) ಶುಕ್ರವಾರ ಜನಗಣತಿಯ ಜನಸಂಖ್ಯೆ ಎಣಿಕೆ ಹಂತಕ್ಕೆ 40 ಪ್ರಶ್ನೆಗಳಿರುವ ಪ್ರಶ್ನಾವಳಿಯನ್ನು ಪ್ರಕಟಿಸಿದ್ದಾರೆ. ವೈಯಕ್ತಿಕ ಮತ್ತು ಪೋಷಕರ ವಿವರಗಳಿಂದ ಹಿಡಿದು ರಾಷ್ಟ್ರೀಯತೆ, ಶಿಕ್ಷಣ, ಬ್ಯಾಂಕ್ ಖಾತೆಗಳು ಹಾಗೂ ಕೋವಿಡ್-19 ಲಸಿಕೆ ಪಡೆದ ಸ್ಥಳದವರೆಗೆ ಹಲವು ಮಾಹಿತಿಗಳನ್ನು ಇದರಲ್ಲಿ ಕೇಳಲಾಗಿದೆ. ಪರಿಶಿಷ್ಟ ಜಾತಿ (SC)/ಪರಿಶಿಷ್ಟ ಪಂಗಡ (ST) ಕುರಿತ ಪ್ರಶ್ನೆಯನ್ನು 'ಜಾತಿ' ಎಂದು ಬದಲಿಸಲಾಗಿದೆ.
14 ಹೊಸ ಅಥವಾ ಬದಲಾದ ಪ್ರಶ್ನೆಗಳು
2011ರ ಜನಗಣತಿಗೆ ಹೋಲಿಸಿದರೆ ಹೊಸದಾಗಿ ಸೇರ್ಪಡೆಯಾದ ಅಥವಾ ಬದಲಾದ ಪ್ರಶ್ನೆಗಳು ಇಂತಿವೆ:
ಸಂಗಾತಿಯ ಹೆಸರು
ರಾಷ್ಟ್ರೀಯತೆ
ತಂದೆಯ ವಿವರಗಳು
ತಾಯಿಯ ವಿವರಗಳು
SC/ST/ಜಾತಿ
ಸಾಕ್ಷರತೆ/ಡಿಜಿಟಲ್ ಸಾಕ್ಷರತೆ
ಪಡೆದಿರುವ ಗರಿಷ್ಠ ಶೈಕ್ಷಣಿಕ ಮಟ್ಟ ಹಾಗೂ ಸ್ಟ್ರೀಮ್
ಕೋವಿಡ್-19 ಲಸಿಕೆ ಪಡೆದ ಸ್ಥಳ
ಒಟ್ಟು ಬ್ಯಾಂಕ್ ಖಾತೆಗಳ ಸಂಖ್ಯೆ
ಮೊಬೈಲ್ ಸಂಖ್ಯೆ (ಲಭ್ಯವಿದ್ದರೆ)
ಆಧಾರ್ ಸಂಖ್ಯೆ (ಲಭ್ಯವಿದ್ದರೆ)
ಮತದಾರರ ಗುರುತಿನ ಚೀಟಿ ಸಂಖ್ಯೆ (ಲಭ್ಯವಿದ್ದರೆ)
ಪಾಸ್‌ಪೋರ್ಟ್ ಸಂಖ್ಯೆ (ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೆ)
ಚಾಲನಾ ಪರವಾನಗಿ ಹೊಂದಿರುವ ಬಗ್ಗೆ ಮಾಹಿತಿ
ಈ ಪೈಕಿ ರಾಷ್ಟ್ರೀಯತೆ, ತಂದೆಯ ವಿವರಗಳು, ತಾಯಿಯ ವಿವರಗಳು, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಸಂಖ್ಯೆ ಮತ್ತು ಚಾಲನಾ ಪರವಾನಗಿಗೆ ಸಂಬಂಧಿಸಿದ ವಿವರಗಳು 2020ರಲ್ಲಿ ಸೂಚಿಸಲಾಗಿದ್ದ NPR ವೇಳಾಪಟ್ಟಿಯಲ್ಲೂ ಇದ್ದವು.
NPR-NRC ಸಂಪರ್ಕವೇ ವಿವಾದಕ್ಕೆ ಕಾರಣ
NPR ಎಂದರೆ ದೇಶದ 'ಸಾಮಾನ್ಯ ನಿವಾಸಿಗಳ' ನೋಂದಣಿ. 1955ರ ಪೌರತ್ವ ಕಾಯ್ದೆಯಡಿ ರೂಪಿಸಲಾದ ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳು, 2003ರ ಅಡಿಯಲ್ಲಿ NPR ನಿಯಂತ್ರಿಸಲ್ಪಡುತ್ತದೆ. ಜನಸಂಖ್ಯಾ ನೋಂದಣಿ ಸಿದ್ಧಪಡಿಸುವುದಕ್ಕೆ ಈ ನಿಯಮಗಳು ಅವಕಾಶ ನೀಡುತ್ತವೆ. ಅದರ ಪರಿಶೀಲನೆಯ ಮೂಲಕ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (NRC) ಸಿದ್ಧಪಡಿಸುವ ವ್ಯವಸ್ಥೆಯನ್ನೂ ನಿಯಮಗಳು ಕಲ್ಪಿಸಿವೆ.
2020ರ NPR ವೇಳಾಪಟ್ಟಿಯಲ್ಲಿ ವ್ಯಕ್ತಿಯ ತಂದೆ ಮತ್ತು ತಾಯಿಯ ಜನ್ಮ ದಿನಾಂಕ ಹಾಗೂ ಜನ್ಮಸ್ಥಳದ ವಿವರಗಳನ್ನು ಕೇಳಲಾಗಿತ್ತು. ಜಿಲ್ಲೆ ಮತ್ತು ರಾಜ್ಯದ ವಿವರಗಳ ಜೊತೆಗೆ, ಅವರು ಭಾರತದ ಹೊರಗೆ ಜನಿಸಿದ್ದರೆ ಜನ್ಮದೇಶದ ಮಾಹಿತಿಯನ್ನೂ ಕೇಳಲಾಗಿತ್ತು.
ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಂಗೀಕಾರದ ಬಳಿಕ 2019-20ರಲ್ಲಿ ಈ ಪ್ರಶ್ನೆಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದವು. NPR ದೇಶವ್ಯಾಪಿ NRCಗೆ ಪೂರ್ವಭಾವಿ ಕ್ರಮವಾಗಿದೆ ಮತ್ತು ಪೋಷಕರ ಜನ್ಮ ವಿವರಗಳನ್ನು ಸಂಗ್ರಹಿಸುವ ಮಾಹಿತಿಯನ್ನು ಮುಂದಿನ ಹಂತದಲ್ಲಿ ಪೌರತ್ವ ನಿರ್ಧರಿಸಲು ಬಳಸಬಹುದು ಎಂದು ವಿರೋಧ ಪಕ್ಷಗಳು ಹಾಗೂ ನಾಗರಿಕ ಸಮಾಜದ ಸಂಘಟನೆಗಳು ಹೇಳಿದ್ದವು.
ಹಲವು ವಿರೋಧ ಪಕ್ಷಗಳ ಆಡಳಿತವಿದ್ದ ರಾಜ್ಯಗಳು NPR ಪ್ರಕ್ರಿಯೆಯನ್ನು ವಿರೋಧಿಸಿ ನಿರ್ಣಯಗಳನ್ನೂ ಅಂಗೀಕರಿಸಿದ್ದವು.
ಆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶವ್ಯಾಪಿ NRC ಕುರಿತು ಹಲವು ಬಾರಿ ಮಾತನಾಡಿದ್ದು ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿತ್ತು. 'ಕಾಲಗಣನೆ' ಪ್ರಸ್ತಾಪದ ಮೂಲಕ NRCಯನ್ನು CAA ಜತೆ ಜೋಡಿಸುವ ರೀತಿಯಲ್ಲೂ ಅವರು ಹೇಳಿಕೆ ನೀಡಿದ್ದರು.
CAA ವಿರೋಧಿ ಪ್ರತಿಭಟನೆಗಳು ತೀವ್ರವಾಗಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2019ರ ಡಿಸೆಂಬರ್ ನಲ್ಲಿ ದೇಶಾದ್ಯಂತ NRC ನಡೆಸಲು ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದರು. ಗೃಹ ಸಚಿವಾಲಯ ಮತ್ತು ಅಮಿತ್ ಶಾ ಅವರೂ ನಂತರ ಹಲವು ಸಂದರ್ಭಗಳಲ್ಲಿ ಇದೇ ನಿಲುವನ್ನು ಪುನರುಚ್ಚರಿಸಿದ್ದರು.
ಕೋವಿಡ್ ನಿಂದ NPR ಮುಂದೂಡಿಕೆ
2020ರ NPR ಪ್ರಕ್ರಿಯೆಯನ್ನು ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂದೂಡಲಾಯಿತು. ಈ ವರ್ಷ ಜನಗಣತಿ ಕಾರ್ಯಾಚರಣೆಗಳನ್ನು ಪುನರಾರಂಭಿಸಿದಾಗ ಸರಕಾರ ಹೊಸ NPR ಪ್ರಕ್ರಿಯೆ ಕುರಿತು ಯಾವುದೇ ಅಧಿಸೂಚನೆ ಹೊರಡಿಸಿಲ್ಲ.
ಪ್ರಸ್ತುತ NPR ನಡೆಸುವ ಅಥವಾ ದೇಶಾದ್ಯಂತ NRC ಜಾರಿಗೆ ತರುವ ಕುರಿತು ಸರಕಾರ ಯಾವುದೇ ಹೊಸ ಅಧಿಸೂಚನೆ ಹೊರಡಿಸಿಲ್ಲ. ಆದರೂ ಹೊಸ ಜನಗಣತಿ ಪ್ರಶ್ನಾವಳಿಯಲ್ಲಿ ಈ ಹಿಂದೆ ವಿವಾದದ ಕೇಂದ್ರವಾಗಿದ್ದ ಹಲವು ಪ್ರಶ್ನೆಗಳು ಮತ್ತೆ ಸೇರ್ಪಡೆಯಾಗಿವೆ.
ಪೌರತ್ವ ನಿಯಮಗಳ ನಿಯಮ 3(4)ರ ಪ್ರಕಾರ, ಕೇಂದ್ರ ಸರಕಾರ ದಿನಾಂಕ ನಿಗದಿಪಡಿಸಿ ಸ್ಥಳೀಯ ನೋಂದಣಾಧಿಕಾರಿಯ ವ್ಯಾಪ್ತಿಯಲ್ಲಿ 'ಸಾಮಾನ್ಯವಾಗಿ ವಾಸಿಸುವ' ಎಲ್ಲ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಿ ಜನಸಂಖ್ಯಾ ನೋಂದಣಿ ಸಿದ್ಧಪಡಿಸಬಹುದು.
ನಿಯಮ 3(5)ರ ಪ್ರಕಾರ, ಭಾರತೀಯ ನಾಗರಿಕರ ಸ್ಥಳೀಯ ನೋಂದಣಿಯಲ್ಲಿ ಜನಸಂಖ್ಯಾ ನೋಂದಣಿಯ ಪರಿಶೀಲನೆಯ ಬಳಿಕ ಭಾರತೀಯ ನಾಗರಿಕರೆಂದು ಗುರುತಿಸಲಾದವರ ವಿವರಗಳನ್ನು ಸೇರಿಸಬಹುದು. ನಿಯಮ 4ರ ಅಡಿಯಲ್ಲಿ ಪರಿಶೀಲನಾ ಪ್ರಕ್ರಿಯೆಯಲ್ಲಿ ಪೌರತ್ವದ ಬಗ್ಗೆ ಅನುಮಾನ ಮೂಡಿದ ವ್ಯಕ್ತಿಗಳ ವಿವರಗಳನ್ನು ಹೆಚ್ಚಿನ ವಿಚಾರಣೆಗಾಗಿ ಗುರುತಿಸುವ ವ್ಯವಸ್ಥೆಯೂ ಇದೆ.
NPR ಮತ್ತು NRC ನಡುವಿನ ಈ ಕಾನೂನುಬದ್ಧ ಸಂಪರ್ಕವೇ 2019-20ರ NPR ಪ್ರಕ್ರಿಯೆಯನ್ನು ರಾಜಕೀಯವಾಗಿ ವಿವಾದಾಸ್ಪದವಾಗಿಸಿತ್ತು.
2010ರಲ್ಲಿ ಮೊದಲ ಬಾರಿ NPR ಮಾಹಿತಿ ಸಂಗ್ರಹ
NPR ಮಾಹಿತಿಯನ್ನು ಮೊದಲ ಬಾರಿಗೆ 2010ರಲ್ಲಿ 2011ರ ಜನಗಣತಿಯ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಹಂತದ ಜತೆಗೆ ಸಂಗ್ರಹಿಸಲಾಗಿತ್ತು. 2015ರಲ್ಲಿ ಮನೆ-ಮನೆಗೆ ತೆರಳಿ ಈ ಮಾಹಿತಿಯನ್ನು ನವೀಕರಿಸಲಾಗಿತ್ತು.
2019ರ ಆಗಸ್ಟ್‌ನಲ್ಲಿ RGI, NPR ಪ್ರಕ್ರಿಯೆಯನ್ನು ಮತ್ತೆ ನಡೆಸಲು ಅಧಿಸೂಚನೆ ಹೊರಡಿಸಿತ್ತು. 2021ರ ಜನಗಣತಿಯ ವೇಳೆ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಹಂತದ ಜತೆಗೆ NPR ನಡೆಸಲು ಯೋಜಿಸಲಾಗಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ 2021ರ ಜನಗಣತಿಯೇ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ NPR ಪ್ರಕ್ರಿಯೆಯೂ ಸ್ಥಗಿತಗೊಂಡಿತು.
2026-27ರ ಕೇಂದ್ರ ಬಜೆಟ್‌ನಲ್ಲಿ 'ಜನಗಣತಿ, ಸಮೀಕ್ಷೆ ಮತ್ತು ಅಂಕಿಅಂಶಗಳು/ಭಾರತದ ರಿಜಿಸ್ಟ್ರಾರ್ ಜನರಲ್' ಶೀರ್ಷಿಕೆಯಡಿ ಜನಗಣತಿ 2027 ಮತ್ತು NPRಗಾಗಿ 6,000 ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಈ ವರ್ಷ ಜನಗಣತಿ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಂಡಾಗ ಸರಕಾರ ಹೊಸ NPR ಪ್ರಕ್ರಿಯೆ ಕುರಿತು ಯಾವುದೇ ಅಧಿಸೂಚನೆ ಹೊರಡಿಸಿಲ್ಲ.
ಮನೆಗಳ ಗಣತಿ ಹಂತವನ್ನು ಎಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದ್ದು, ಅದರಲ್ಲಿ NPR ಕುರಿತು ಯಾವುದೇ ಉಲ್ಲೇಖವಿಲ್ಲ.
2020ರಿಂದ ಹಿಂದಿನ ಬಜೆಟ್ ಗಳಲ್ಲಿ NPRಗೆ ಮಾಡಲಾಗಿದ್ದ ಅನುದಾನದ ಮುಂದುವರಿಕೆಯ ಭಾಗವಾಗಿಯೇ ಈ ಮೊತ್ತವನ್ನು ಮೀಸಲಿಡಲಾಗಿದೆ. ಸರಕಾರ ಮುಂದಿನ ದಿನಗಳಲ್ಲಿ NPR ನಡೆಸಲು ನಿರ್ಧರಿಸಿದರೆ ಅಗತ್ಯ ಹಣ ಲಭ್ಯವಾಗುವಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದರು.

