ರಾಂಚಿ: ಚೈಲ್ಡ್ ಡೆವಲಪ್‌ಮೆಂಟ್ ಪ್ರಾಜೆಕ್ಟ್ ಆಫೀಸರ್ಸ್ (ಸಿಡಿಪಿಒ) ಮತ್ತು ಸಿಬ್ಬಂದಿ ನೇಮಕ ಆಯೋಗದ (ಜೆಎಸ್‌ಎಸ್‌ಸಿ) ಪರೀಕ್ಷೆಯ ಮೂಲಕ ಆಯ್ಕೆಯಾದ ಅಭ್ಯರ್ಥಿಗಳ ನೇಮಕವನ್ನು ರದ್ದುಗೊಳಿಸಿ ಹೊರಡಿಸಲಾಗಿದ್ದ ಅಧಿಸೂಚನೆಗಳಿಗೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಗುರುವಾರಷ್ಟೇ ನ್ಯಾಯಾಲಯವು ಜಾರ್ಖಂಡ್ ಲೋಕಸೇವಾ ಆಯೋಗದ 11, 13ನೇ ನೇಮಕ ಪರೀಕ್ಷೆಗಳನ್ನು ರದ್ದುಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿತ್ತು.
ಆಹಾರ ಸುರಕ್ಷತಾ ಅಧಿಕಾರಿಗಳ ನೇಮಕ ರದ್ಧತಿ ಆದೇಶಕ್ಕೂ ತಡೆ ನೀಡಿದ್ದ ನ್ಯಾಯಾಲಯ, ಅರ್ಜಿಗಳ ಬಗ್ಗೆ ಸೆಪ್ಟೆಂಬರ್ 15ರೊಳಗಾಗಿ ಉತ್ತರಿಸುವಂತೆ ಜಾರ್ಖಂಡ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. 'ನ್ಯಾಯಾಲಯ ತಡೆ ನೀಡಿರುವುದರಿಂದ 450 ಅಭ್ಯರ್ಥಿಗಳು ನಿರಾಳರಾಗಿದ್ದಾರೆ' ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದರು.
ನೇಮಕ ಪರೀಕ್ಷೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಕಾರಣ ಜಾರ್ಖಂಡ್ ಸರ್ಕಾರವು ಜೆಪಿಎಸ್‌ಸಿ ಮತ್ತು ಹೊರಗುತ್ತಿಗೆ ಸಂಸ್ಥೆ 2014ರಿಂದ ನಡೆಸಿದ್ದ 22 ಪರೀಕ್ಷೆಗಳನ್ನು ರದ್ದುಗೊಳಿಸಿ ಮತ್ತು 23 ಪರೀಕ್ಷೆಗಳ ಕುರಿತು ತನಿಖೆಗೆ ಮಂಗಳವಾರ ಆದೇಶ ಹೊರಡಿಸಿತ್ತು.

