ರಾಯ್ಪುರ: ಛತ್ತೀಸ್‌ಗಢದ ಸರಕಾರಿ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾಲಯದ ಎರಡು B.Sc ಕೃಷಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 7ರಂದು ನಡೆದಿದ್ದ ಪ್ರಥಮ ವರ್ಷದ ಃ.Sಛಿ ಕೃಷಿಯ ಸಸ್ಯ ರೋಗಶಾಸ್ತ್ರ ಪರೀಕ್ಷೆಯನ್ನು ವಿಶ್ವವಿದ್ಯಾಲಯ ರದ್ದುಗೊಳಿಸಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಆಗಸ್ಟ್ 20ರಂದು ನಡೆದಿದ್ದ ಎರಡನೇ ವರ್ಷದ B.Sc ಕೃಷಿಯ ಕೀಟಶಾಸ್ತ್ರ ಪರೀಕ್ಷೆಯ ಪ್ರಶ್ನೆಪತ್ರಿಕೆ ಮೊದಲು ಸೋರಿಕೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ದುರ್ಗ್ ಜಿಲ್ಲೆಯ ಖಾಸಗಿ ಕಾಲೇಜೊಂದರ ಪ್ರಾಧ್ಯಾಪಕ ಹಾಗೂ ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು.
ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆಗಸ್ಟ್ 7ರಂದು ನಡೆದಿದ್ದ ಪ್ರಥಮ ವರ್ಷದ B.Sc ಕೃಷಿಯ ಸಸ್ಯ ರೋಗಶಾಸ್ತ್ರ ಪರೀಕ್ಷೆಯ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕುಲಪತಿ ಡಾ. ಗಿರೀಶ್ ಚಾಂದೇಲ್ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ, ಸಸ್ಯ ರೋಗಶಾಸ್ತ್ರ ಪರೀಕ್ಷೆಯನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಯಿತು.
ಸೆಪ್ಟೆಂಬರ್ ಮೊದಲ ವಾರದಲ್ಲಿ ಮರುಪರೀಕ್ಷೆ
ಆಗಸ್ಟ್ 7ರಂದು ನಡೆದಿದ್ದ ಸಸ್ಯ ರೋಗಶಾಸ್ತ್ರ ಪರೀಕ್ಷೆಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಮರು ನಡೆಸಲಾಗುವುದು. ಇದೇ ಅವಧಿಯಲ್ಲಿ ಆಗಸ್ಟ್ 20ರಂದು ಸೋರಿಕೆಯಾಗಿದ್ದ ಕೀಟಶಾಸ್ತ್ರ ಪ್ರಶ್ನೆಪತ್ರಿಕೆಯ ಪರೀಕ್ಷೆಯನ್ನೂ ಮರು ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಲೇಜಿಗೆ ನೋಟಿಸ್
ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂಬ ಆರೋಪದ ಮೇಲೆ ದುರ್ಗ್ ಜಿಲ್ಲೆಯ ಭಾರತೀಯ ಕೃಷಿ ಕಾಲೇಜಿನ ವಿರುದ್ಧವೂ ವಿಶ್ವವಿದ್ಯಾಲಯ ಕ್ರಮ ಆರಂಭಿಸಿದೆ. ಈ ಸಂಬಂಧ ಕಾಲೇಜಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಗಸ್ಟ್ 20ರಂದು ನಡೆದಿದ್ದ ಕೀಟಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಯ್ಪುರ ಪೊಲೀಸರು ಬಂಧಿಸಿರುವ ವಿದ್ಯಾರ್ಥಿಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

