ನವದೆಹಲಿ: ಕೇಂದ್ರ ಸರಕಾರವು ಬುಧವಾರ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೇ ವಿವಾದಾಸ್ಪದ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ತಿದ್ದುಪಡಿ ಮಸೂದೆ,2026ನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ರವಾನಿಸಿದೆ.
ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆಯೇ ಸಹಾಯಕ ಗೃಹಸಚಿವ ನಿತ್ಯಾನಂದ್ ರಾಯ್ ಅವರು ಮಸೂದೆಯನ್ನು ಜೆಪಿಸಿಗೆ ರವಾನಿಸುವ ನಿರ್ಣಯವನ್ನು ಮಂಡಿಸಿದರು.
ಇದಕ್ಕೂ ಮುನ್ನ ಲೋಕಸಭೆಯ ಪೂರಕ ಕಾರ್ಯಸೂಚಿಯಲ್ಲಿ ಎಫ್‌ಸಿಆರ್‌ಎ ಮಸೂದೆಯನ್ನು ಜೆಪಿಸಿಗೆ ಕಳುಹಿಸುವ ನಿರ್ಣಯವನ್ನು ಗೃಹಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ಪಟ್ಟಿಮಾಡಲಾಗಿದ್ದರಿಂದ, ಅವರ ಗೈರುಹಾಜರಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿದವು.
ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ,2026ನ್ನು ಸಂಸತ್ತಿನ ಉಭಯ ಸದನಗಳ ಜಂಟಿ ಸಮಿತಿಗೆ ಉಲ್ಲೇಖಿಸಬೇಕು. ಈ ಸಮಿತಿಯು ಲೋಕಸಭಾ ಸ್ಪೀಕರ್ ಅವರಿಂದ ನಾಮನಿರ್ದೇಶನಗೊಳ್ಳುವ 21 ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸಭಾಪತಿಯವರಿಂದ ನಾಮನಿರ್ದೇಶನಗೊಳ್ಳುವ 10 ರಾಜ್ಯಸಭಾ ಸದಸ್ಯರನ್ನು ಒಳಗೊಂಡಿರಬೇಕು ಎಂದು ಕಾರ್ಯಸೂಚಿಯಲ್ಲಿ ತಿಳಿಸಲಾಗಿತ್ತು.
ಈ ಮಸೂದೆಯು ಎನ್‌ಜಿಒಗಳು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ವಿರೋಧಿಸುತ್ತಿದ್ದರೆ ಸರಕಾರವು ಈ ಆರೋಪವನ್ನು ತಳ್ಳಿಹಾಕಿದೆ.
ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2026ರಲ್ಲಿ ಸಂಸ್ಥೆಯೊಂದರ ಎಫ್‌ಸಿಆರ್‌ಎ ನೋಂದಣಿ ರದ್ದಾದಾಗ, ಹಿಂಪಡೆದಾಗ ಅಥವಾ ನವೀಕರಣಗೊಳ್ಳದೆ ಕೊನೆಗೊಂಡಾಗ ವಿದೇಶಿ ದೇಣಿಗೆ ಮತ್ತು ಆ ಹಣದಿಂದ ಸೃಷ್ಟಿಸಲಾದ ಆಸ್ತಿಗಳ ನಿರ್ವಹಣೆಯನ್ನು ವಹಿಸಿಕೊಳ್ಳಲು ನಿಯೋಜಿತ ಪ್ರಾಧಿಕಾರವನ್ನು ರಚಿಸುವ ಅಧಿಕಾರವನ್ನು ಸರಕಾರಕ್ಕೆ ನೀಡಲು ಪ್ರಸ್ತಾವಿಸಲಾಗಿದೆ.
ಈ ಮಸೂದೆಯನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಅದನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಪ್ರತಿಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸಮಿತಿಯ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಸಿಗುವುದರಿಂದ ಮಸೂದೆಯನ್ನು ಜೆಪಿಸಿಗೆ ಕಳುಹಿಸುವ ನಿರ್ಧಾರವನ್ನು ವಿರೋಧ ಪಕ್ಷಗಳು ಸ್ವಾಗತಿಸಬೇಕು ಎಂದರು.
ಮಸೂದೆಯು ಅಲ್ಪಸಂಖ್ಯಾತ ವಿರೋಧಿಯಾಗಿದೆ ಎಂಬ ವಾದವನ್ನು ತಿರಸ್ಕರಿಸಿದ ಅವರು, 'ಈ ಮಸೂದೆಯಲ್ಲಿ ದೇಶದ ಅಲ್ಪಸಂಖ್ಯಾತರ ವಿರುದ್ಧವಾಗಿರುವ ಒಂದೇ ಒಂದು ನಿಯಮವನ್ನು ನನಗೆ ತೋರಿಸಿ' ಎಂದು ಪ್ರತಿಪಕ್ಷಕ್ಕೆ ಸವಾಲು ಹಾಕಿದರು.
ಎನ್‌ಜಿಒಗಳಿಗೆ ಬರುವ ವಿದೇಶಿ ಧನಸಹಾಯವನ್ನು ನಿಯಂತ್ರಿಸುವ ಗೃಹ ಸಚಿವಾಲಯವು ನಿಯೋಜಿತ ಪ್ರಾಧಿಕಾರದ ಮೂಲಕ ವಿದೇಶಿ ದೇಣಿಗೆ ಮತ್ತು ಆಸ್ತಿಗಳ ಹಸ್ತಾಂತರ, ಮೇಲ್ವಿಚಾರಣೆ, ನಿರ್ವಹಣೆ ಮತ್ತು ವಿಲೇವಾರಿಗಾಗಿ ಸಮಗ್ರ ಶಾಸನಬದ್ಧ ಚೌಕಟ್ಟನ್ನು ರಚಿಸುವುದರ ಜೊತೆಗೆ ದಂಡಗಳನ್ನು ತರ್ಕಬದ್ಧಗೊಳಿಸುವುದನ್ನು ಮತ್ತು ತನಿಖೆಗಳನ್ನು ಪ್ರಾರಂಭಿಸಲು ಕೇಂದ್ರದ ಕಡ್ಡಾಯ ಅನುಮೋದನೆ ಪಡೆಯುವುದನ್ನು ಈ ತಿದ್ದುಪಡಿಗಳು ಗುರಿಯಾಗಿಸಿಕೊಂಡಿವೆ ಎಂದು ಪ್ರತಿಪಾದಿಸಿದೆ.

