ಅಹ್ಮದಾಬಾದ್ : ಜುಲೈ ಮೊದಲ ವಾರದಿಂದ ಗುಜರಾತಿನಲ್ಲಿ ಚಾಂದೀಪುರಾ ವೆಸಿಕುಲೋವೈರಸ್ ಸೋಂಕಿನಿಂದಾಗಿ 22 ಮಕ್ಕಳು ಮೃತಪಟ್ಟಿದ್ದಾರೆ ಎಂದು ರಾಜ್ಯದ ಆರೋಗ್ಯ ಸಚಿವ ಪ್ರಫುಲ್ ಪನಶೇರಿಯಾ ತಿಳಿಸಿದ್ದಾರೆ.
ಸೋಂಕು ದೃಢಪಟ್ಟಿರುವ ಏಳು ರೋಗಿಗಳು ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಇತರ ಆರು ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಗುಜರಾತ್‌ನಲ್ಲಿ ಈವರೆಗೆ 184 ಶಂಕಿತ ಚಾಂದೀಪುರಾ ವೈರಸ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 35 ಪ್ರಕರಣಗಳು ದೃಢಪಟ್ಟಿದ್ದು, ಆಗಸ್ಟ್ 3ರ ವೇಳೆಗೆ 11 ಶಂಕಿತ ಪ್ರಕರಣಗಳ ಪರೀಕ್ಷಾ ವರದಿಗಳು ಬಾಕಿಯಿವೆ ಎಂದು ಎಂದು ಆರೋಗ್ಯ ಸಚಿವರ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಸೋಂಕಿಗೆ ತುತ್ತಾದವರೆಲ್ಲ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ.
ಚಾಂದೀಪುರಾ ವೈರಲ್ ಎನ್ಸೆಫಾಲಿಟಿಸ್ ಎಂದೂ ಕರೆಯಲ್ಪಡುವ ಈ ವೈರಸ್ ಮುಖ್ಯವಾಗಿ ಮರಳು ನೊಣಗಳು ಮತ್ತು ಹಗಲಿನಲ್ಲಿ ಕಚ್ಚುವ ಹಾಗೂ ಡೆಂಗ್ಯೂ ಹರಡುವ 'ಈಡಿಸ್ ಈಜಿಪ್ಟಿ' ಸೇರಿದಂತೆ ವಿವಿಧ ಸೊಳ್ಳೆಗಳಿಂದ ಹರಡುತ್ತದೆ. ಈ ಸೋಂಕು ಮೆದುಳಿನ ಸಕ್ರಿಯ ಅಂಗಾಂಶಗಳ ಉರಿಯೂತ ಅಥವಾ ಎನ್ಸೆಫಾಲಿಟಿಸ್‌ಗೆ ಕಾರಣವಾಗಬಹುದು.
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈ ವೈರಸ್‌ಗೆ ಬೇಗನೆ ತುತ್ತಾಗುತ್ತಾರೆ. ಜ್ವರ,ವಾಂತಿ,ಪ್ರಜ್ಞಾಹೀನತೆ/ಗೊಂದಲ,ಸೆಳೆತ, ಭೇದಿ,ನರಸಂಬಂಧಿ ಸಮಸ್ಯೆಗಳು ಮತ್ತು ಮೆದುಳಿನ ಪೊರೆಯ ಉರಿಯೂತ ಇದರ ಲಕ್ಷಣಗಳಾಗಿವೆ.
ಸೋಂಕಿನ ಪ್ರಕರಣಗಳು ರಾಜ್ಯದ ಯಾವುದೇ ನಿರ್ದಿಷ್ಟ ಸ್ಥಳ ಅಥವಾ ಗ್ರಾಮಕ್ಕೆ ಸೀಮಿತವಾಗಿಲ್ಲ ಎಂದು ತಿಳಿಸಿರುವ ಪನಶೇರಿಯಾ, ಜ್ವರ, ವಾಂತಿ,ಸೆಳೆತ ಅಥವಾ ಯಾವುದೇ ಗಂಭೀರ ಅನಾರೋಗ್ಯದ ಲಕ್ಷಣಗಳನ್ನು ತೋರಿಸುವ ಮಕ್ಕಳನ್ನು ತಡಮಾಡದೆ ಹತ್ತಿರದ ಸರಕಾರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಪೋಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಚಾಂದೀಪುರಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ಪ್ರಸ್ತುತ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಔಷಧ ಲಭ್ಯವಿಲ್ಲ ಎಂದು ಅವರು ಹೇಳಿದ್ದಾರೆ.

