HEALTH TIPS

ಜಂತರ್ ಮಂತರ್ ಪ್ರತಿಭಟನೆ ವೇಳೆ ISI ದಾಳಿ ಸಂಚು ಹೇಳಿಕೆ: ಅಮೃತಸರ ಪೊಲೀಸ್ ಕಮಿಷನರ್ ವರ್ಗಾವಣೆ

ಚಂಡೀಗಢ: ದಿಲ್ಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯ ವೇಳೆ ಭಯೋತ್ಪಾದಕ ದಾಳಿ ನಡೆಸಲು ಪಾಕಿಸ್ತಾನ ಬೆಂಬಲಿತ ISI ಸಂಚು ರೂಪಿಸಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ಅಮೃತಸರ ಪೊಲೀಸ್ ಕಮಿಷನರ್ ಗುರ್ಪ್ರೀತ್ ಸಿಂಗ್ ಭುಲ್ಲರ್ ಅವರನ್ನು ಪಂಜಾಬ್ ಸರಕಾರ ಶುಕ್ರವಾರ ವರ್ಗಾವಣೆ ಮಾಡಿದೆ.


2004ರ ಬ್ಯಾಚ್ ನ IPS ಅಧಿಕಾರಿಯಾಗಿರುವ ಗುರ್ಪ್ರೀತ್ ಸಿಂಗ್ ಭುಲ್ಲರ್ ಅವರಿಗೆ ಸದ್ಯ ಯಾವುದೇ ಹೊಸ ಹುದ್ದೆ ನೀಡಲಾಗಿಲ್ಲ. ಅವರ ಸ್ಥಾನಕ್ಕೆ ಉಪ ಪೊಲೀಸ್ ಮಹಾ ನಿರೀಕ್ಷಕ (DIG) ಹರ್ಮನ್ ಬೀರ್ ಸಿಂಗ್ ಅವರನ್ನು ಅಮೃತಸರದ ನೂತನ ಪೊಲೀಸ್ ಕಮಿಷನರ್ ರನ್ನಾಗಿ ನೇಮಿಸಲಾಗಿದೆ.

ಆ. 4ರಂದು ISI ಬೆಂಬಲಿತ ಗಡಿ ಆಚೆಯ ಭಯೋತ್ಪಾದನಾ ಸಂಚನ್ನು ವಿಫಲಗೊಳಿಸಿರುವುದಾಗಿ ಪಂಜಾಬ್ ಪೊಲೀಸರು ಪ್ರಕಟಿಸಿದ್ದರು. ಈ ಪ್ರಕರಣದಲ್ಲಿ ನಾಲ್ವರು ಅಪ್ರಾಪ್ತರು ಸೇರಿದಂತೆ ಒಂಭತ್ತು ಮಂದಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದರು. ಈ ಪ್ರಕಟನೆಯ ಬೆನ್ನಲ್ಲೇ ಪ್ರಕರಣ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.

ಬಂಧಿತರು ಪಾಕಿಸ್ತಾನ ಮೂಲದ ಸೂತ್ರಧಾರಿಗಳ ಸೂಚನೆಯಂತೆ ಸ್ಥಳೀಯ ಯುವಕರನ್ನು ತಮ್ಮ ಜಾಲಕ್ಕೆ ಸೆಳೆಯುವುದು, ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು ಹಾಗೂ ಸಾರ್ವಜನಿಕ ಶಾಂತಿ ಕದಡುವ ಕೃತ್ಯಗಳನ್ನು ನಡೆಸಲು ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದರು.

ಪ್ರಕರಣದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಗುರ್ಪ್ರೀತ್ ಸಿಂಗ್ ಭುಲ್ಲರ್, ಬಂಧಿತರಲ್ಲಿ ಒಬ್ಬ ಏಜೆಂಟ್ ದಿಲ್ಲಿಯ ಜಂತರ್ ಮಂತರ್ ಗೆ ತೆರಳಿ ಸ್ಥಳದ ಪರಿಶೀಲನೆ ನಡೆಸಿದ್ದ. ಪೆಟ್ರೋಲ್ ಬಾಂಬ್ ಗಳನ್ನು ಬಳಸಿ ಶಾಂತಿ ಕದಡುವ ಕೃತ್ಯ ನಡೆಸುವಂತೆ ಪಾಕಿಸ್ತಾನ ಮೂಲದ ಸೂತ್ರಧಾರಿಗಳು ಆತನಿಗೆ ಸೂಚನೆ ನೀಡಿದ್ದರು ಎಂದು ಹೇಳಿದ್ದರು. ಆದರೆ, ಆರೋಪಿಗಳು ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದರು.

ಆದರೂ, ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಪ್ರತಿಭಟನಾ ಸ್ಥಳದಲ್ಲಿ ದೇಶವಿರೋಧಿ ಶಕ್ತಿಗಳು ಉಪಸ್ಥಿತರಿದ್ದವು ಎಂಬ ಅರ್ಥದಲ್ಲಿ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಹಲವಾರು ಬಿಜೆಪಿ ನಾಯಕರು ಪ್ರಶ್ನಿಸಿದ್ದರು.

ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್, ಹಿರಿಯ ನಾಯಕ ಮನೀಶ್ ಸಿಸೋಡಿಯಾ ಹಾಗೂ ಪಂಜಾಬ್ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಸೇರಿದಂತೆ ಹಲವು ಆಪ್ ನಾಯಕರು ಬೆಂಬಲ ನೀಡಿದ್ದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries