ಆದರೆ ಸರ್ಕಾರವು ಈ ಕುರಿತು ನಿರ್ದಿಷ್ಟ ಕ್ರಮವನ್ನು ಘೋಷಿಸುವವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ರಾಜ್ಯದ ನೇಮಕಾತಿ ಪ್ರಕ್ರಿಯೆಯಲ್ಲಿ ಸಮಗ್ರ ಸುಧಾರಣೆಗಳ ಭಾಗವಾಗಿ ಜಾರ್ಖಂಡ್‌ನಾದ್ಯಂತದ ವಿದ್ಯಾರ್ಥಿಗಳ ಮಾತುಗಳನ್ನು ಆಲಿಸಲು ಬಯಸುವುದಾಗಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಸಭೆ ನಡೆಯಿತು.
ಸರಕಾರದ ಪರವಾಗಿ ಸುದಿವ್ಯ ಕುಮಾರ್, ಚಮ್ರಾ ಲಿಂಡಾ, ದೀಪಿಕಾ ಪಾಂಡೆ ಸಿಂಗ್ ಮತ್ತು ಸಂಜಯ್ ಪ್ರಸಾದ್‌ರನ್ನೊಳಗೊಂಡ ಸಚಿವರ ನಿಯೋಗವು ಜೆಎಸ್‌ಎಸ್ಸಿ-ಜೆಪಿಎಸ್ಸಿ ಸುಧಾರಣೆಗಳ ವೇದಿಕೆಯ 10 ಸದಸ್ಯರ ನಿಯೋಗದೊಂದಿಗೆ ಸಭೆ ನಡೆಸಿತು.
ಸಭೆಯ ನಂತರ ಮಾತನಾಡಿದ ಸಚಿವ ಕುಮಾರ್, ಚರ್ಚೆಗಳು ಧನಾತ್ಮಕವಾಗಿದ್ದವು ಮತ್ತು ನಿಯೋಗವು ಈ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ನೀಡಲಿದೆ ಎಂದು ತಿಳಿಸಿದರು.
ಆದರೆ, ವೇದಿಕೆಯ ಪ್ರಮುಖ ವಕ್ತಾರರಲ್ಲಿ ಒಬ್ಬರಾದ ಕುನಾಲ್ ಪ್ರತಾಪ್ ಸಿಂಗ್ ಮಾತನಾಡಿ, ಸರ್ಕಾರವು ನಿರ್ದಿಷ್ಟ ನಿರ್ಧಾರವನ್ನು ತಿಳಿಸುವವರೆಗೆ ಪ್ರತಿಭಟನೆಯು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಭೇಟಿಯ ಬಳಿಕ ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿರುವ ಜೆಎಸ್‌ಎಸ್ಸಿ-ಜೆಪಿಎಸ್ಸಿ ಸುಧಾರಣಾ ವೇದಿಕೆ, "ಆಗಸ್ಟ್ 10ರೊಳಗೆ ಜೆಪಿಎಸ್ಸಿ ಮತ್ತು ಜೆಎಸ್‌ಎಸ್ಸಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಬೇಡಿಕೆಗಳ ಕುರಿತು ನಿರ್ದಿಷ್ಟ ನಿರ್ಧಾರಗಳನ್ನು ಕೈಗೊಂಡು ಅವುಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಅಂದು ಪ್ರಜಾಸತಾತ್ಮಕ ರೀತಿಯಲ್ಲಿ ವಿಧಾನಸಭೆ ಮುತ್ತಿಗೆ ಹಾಕುವ ನಮ್ಮ ಪೂರ್ವಘೋಷಿತ ನಿರ್ಧಾರದಂತೆ ಮುಂದುವರಿಯುತ್ತೇವೆ" ಎಂದು ತಿಳಿಸಿದೆ.

