ಇಂದೋರ್: ಮಧ್ಯಪ್ರದೇಶದ ಖಂಡ್ವಾದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ವ್ಯಕ್ತಿಯೋರ್ವ ನಾಯಿಯ ಮುಖವಾಡ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಗೆ ತೆರಳಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ್ ರಾಥೋರ್ ಅವರೊಂದಿಗೆ ಈ ವ್ಯಕ್ತಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿದ್ದಾರೆ. ಇದರಿಂದ ಅಲ್ಲಿದ್ದ ಅಧಿಕಾರಿಗಳು ಹಾಗೂ ಸ್ಥಳೀಯರು ಅಚ್ಚರಿಗೊಂಡಿದ್ದಾರೆ.
ಮುನ್ಸಿಪಲ್ ಕಾರ್ಪೊರೇಶನ್‌ನ ಬೀದಿನಾಯಿಗಳ ನಿರ್ವಹಣೆಯಲ್ಲಿನ ಹಣಕಾಸಿನ ಅಕ್ರಮಗಳ ಬಗ್ಗೆ ಗಮನ ಸೆಳೆಯುವ ಉದ್ದೇಶದಿಂದ ಈ ಪ್ರತಿಭಟನೆ ನಡೆಸಲಾಗಿದೆ ಎಂದು ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ್ ರಾಥೋರ್ ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಬೀದಿ ನಾಯಿಗಳ ಸಂತಾನಹರಣ ಅಭಿಯಾನಗಳಿಗೆ ನಗರ ಪಾಲಿಕೆ ಸುಮಾರು 40 ಲಕ್ಷ ರೂ. ಖರ್ಚು ಮಾಡಿದ್ದರೂ, ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣವಿಲ್ಲದೆ ನಿರಂತರವಾಗಿ ಹೆಚ್ಚುತ್ತಲೇ ಇದೆ.ಬೀದಿ ನಾಯಿಗಳಿಂದ ಸ್ಥಳೀಯ ನಿವಾಸಿಗಳಲ್ಲಿ ವಿಶೇಷವಾಗಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರಲ್ಲಿ ಆತಂಕ ಉಂಟು ಮಾಡಿದೆ ಎಂದು ಹೇಳಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಖಂಡ್ವಾದಲ್ಲಿ 13,225 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಇದರಿಂದ ಬೀದಿ ನಾಯಿಗಳ ಸಂತಾನಹರಣ ಅಭಿಯಾನದ ಪರಿಣಾಮಕಾರಿತ್ವ ಮತ್ತು ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ ಎಂದು ಹೇಳಿದರು.
ನಾಯಿಗಳ ಸಂತಾನಹರಣಕ್ಕೆ ನಿಜವಾಗಿಯೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೆ, ಬೀದಿ ನಾಯಿಗಳ ಸಂಖ್ಯೆ ಏಕೆ ಕಡಿಮೆಯಾಗಿಲ್ಲ? ನಾಯಿ ಕಡಿತ ಪ್ರಕರಣಗಳು ಏಕೆ ಹೆಚ್ಚುತ್ತಿವೆ? ಇದು ಕೇವಲ ಆಡಳಿತಾತ್ಮಕ ವಿಚಾರವಲ್ಲ, ನೇರವಾಗಿ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ ಎಂದು ದೀಪಕ್ ರಾಥೋರ್ ಹೇಳಿದರು.
ಇದಲ್ಲದೆ ಹೆಚ್ಚುವರಿ ಜಿಲ್ಲಾಧಿಕಾರಿ ಕಾಶೀರಾಮ್ ಬಡೋಲೆ ಅವರಿಗೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

