ನವದೆಹಲಿ: ಜು. 23 ರಂದು ತಮ್ಮ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 2026ರ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯನ್ನು (NEET) ಮರು ಪರೀಕ್ಷೆ ನಡೆಸಲು ಸರ್ಕಾರ ಅತ್ಯಂತ ವೇಗವಾಗಿ ಕ್ರಮ ಕೈಗೊಂಡಿದೆ ಎಂದಿದ್ದರು. "ಕೇವಲ ಐದಾರು ದಿನಗಳ ಹಿಂದೆಯಷ್ಟೇ ಫಲಿತಾಂಶ ಪ್ರಕಟವಾಗಿದೆ.
ದೇಶಾದ್ಯಂತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಉತ್ತಮ ಸುದ್ದಿ ಬಂದಿದೆ" ಎಂದು ಮೋದಿ ಹೇಳಿದ್ದರು.
ಮೇ ತಿಂಗಳಿನಲ್ಲಿ ನಡೆದಿದ್ದ ಮೊದಲ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ವಿಫಲವಾದ ಸರ್ಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಸಿದ್ದ ವಿದ್ಯಾರ್ಥಿಗಳ ಆಕ್ರೋಶವನ್ನು ಶಮನಗೊಳಿಸುವ ಉದ್ದೇಶದಿಂದ ಪ್ರಧಾನಿ ಈ ವಿಡಿಯೊ ಹಂಚಿಕೊಂಡಿದ್ದರು.
ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಧರ್ಮೇಂದ್ರ ಪ್ರಧಾನ್ ಸಹ ಮರುಪರೀಕ್ಷೆಯ ಯಶಸ್ಸನ್ನು ಉಲ್ಲೇಖಿಸಿದ್ದರು. "ವಿದ್ಯಾರ್ಥಿಗಳು, ಪೋಷಕರು ಮತ್ತು ರಕ್ಷಕರ ಸಹಕಾರದೊಂದಿಗೆ 2026 ಜೂನ್ 21 ರಂದು ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ" ಎಂದು ಅವರು ತಿಳಿಸಿದ್ದರು.
ಆದರೆ ಸರ್ಕಾರದ ಈ ಸ್ವಯಂ ಪ್ರಶಂಸೆಯ ಹೇಳಿಕೆಗಳ ಹೊರತಾಗಿಯೂ, ಹಲವು ವಿದ್ಯಾರ್ಥಿಗಳಿಗೆ ಈ ಪರೀಕ್ಷಾ ಪ್ರಕ್ರಿಯೆಯು ಅತ್ಯಂತ ಆತಂಕವುಂಟು ಮಾಡಿತ್ತು. ಇದು ಈಗಾಗಲೇ ಪರೀಕ್ಷೆಯ ಒತ್ತಡದಲ್ಲಿದ್ದ ವಿದ್ಯಾರ್ಥಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದವು.
ಫಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪರ ಧ್ವನಿ ಎತ್ತಿದವರು ತಮಗಾದ ಎಡವಟ್ಟುಗಳು ಹಾಗೂ ವ್ಯತ್ಯಾಸಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ನೀಟ್ ಪೋರ್ಟಲ್‌ನಲ್ಲಿ ತೋರಿಸಲಾಗುತ್ತಿರುವ ಒಎಂಆರ್ (OMR) ಉತ್ತರ ಪತ್ರಿಕೆಗಳು ತಮ್ಮ ಮೂಲ ಉತ್ತರ ಪತ್ರಿಕೆಗಳಿಗೆ ಹೋಲಿಕೆಯಾಗುತ್ತಿಲ್ಲ ಎಂದು ಕೆಲವರು ಆರೋಪಿಸಿದರು. ಇನ್ನು ಕೆಲವರಿಗೆ ಅಂಕಪಟ್ಟಿ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಮತ್ತೆ ಕೆಲವರು ತಾವು ಪ್ರತಿ ಬಾರಿ ಲಾಗಿನ್ ಆದಾಗಲೂ ಪೋರ್ಟಲ್‌ನಲ್ಲಿ ಕಾಣಿಸುವ ಅಂಕಗಳು ಬದಲಾಗುತ್ತಿವೆ ಎಂದು ದೂರಿದರು.
ಅವರಲ್ಲಿ ಹರ್ಯಾಣದ ವಿದ್ಯಾರ್ಥಿಯೊಬ್ಬರು ನೀಟ್ ಪೋರ್ಟಲ್‌ನಲ್ಲಿದ್ದ ಒಎಂಆರ್ ಉತ್ತರ ಪತ್ರಿಕೆಯು ತಮ್ಮ ಮೂಲ ಉತ್ತರ ಪತ್ರಿಕೆಗೆ ತಾಳೆಯಾಗುತ್ತಿಲ್ಲ ಎಂಬುದನ್ನು ಗಮನಿಸಿದ್ದರು. ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, ಕೇವಲ 24 ಗಂಟೆಗಳ ಅವಧಿಯಲ್ಲಿ ತಮ್ಮ ಫಲಿತಾಂಶ ಮೂರು ಬಾರಿ ಬದಲಾಗಿದೆ ಎಂದು ಆ ವಿದ್ಯಾರ್ಥಿ ದೂರಿದ್ದಾರೆ.
ಪರೀಕ್ಷೆಯ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಿಸಿದ ಪ್ರೊವಿಷನಲ್ ಆನ್ಸರ್ ಕೀ ಆಧಾರದ ಮೇಲೆ ತಮ್ಮ ಉತ್ತರಗಳನ್ನು ಪರಿಶೀಲಿಸಿದಾಗ ತಮಗೆ 620 ಅಂಕಗಳು ಬರಬಹುದು ಎಂದು ಅಂದಾಜಿಸಿದ್ದಾಗಿ ವಿದ್ಯಾರ್ಥಿ ಹೇಳಿದ್ದಾರೆ. ಕೆಲ ದಿನಗಳ ನಂತರ ಸಂಸ್ಥೆಯು ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪ್ರತಿಯನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಿತ್ತು. ಆಗಲೂ ಪರಿಶೀಲಿಸಿದಾಗ ಅಷ್ಟೇ ಅಂಕಗಳು ಬರುವ ನಿರೀಕ್ಷೆಯಿತ್ತು.
ಆದರೆ ಫಲಿತಾಂಶದ ದಿನ ತಮಗೆ 650 ಅಂಕಗಳು ಬಂದಿರುವುದನ್ನು ಕಂಡು ಅವರು ಅಚ್ಚರಿಗೊಂಡಿದ್ದರು. ಅರ್ಜಿಯ ಪ್ರಕಾರ, ಅದಾದ ತಕ್ಷಣವೇ ಸಿಸ್ಟಂ ಅವರನ್ನು "ಆಟೋಮ್ಯಾಟಿಕ್ ಆಗಿ ಲಾಗ್‌ಔಟ್ ಮಾಡಿತು". ಮತ್ತೆ ಲಾಗಿನ್ ಆದಾಗ, ಅವರ ಅಂಕಗಳು 500ಕ್ಕೆ ಬದಲಾಗಿತ್ತು
ಮರುದಿನ ತಮಗೆ ಇನ್ನಷ್ಟು ಆಘಾತ ಕಾದಿತ್ತು , ಅಂಕಗಳು ದಿಢೀರನೆ 135ಕ್ಕೆ ಕುಸಿದಿರುವುದು ಕಂಡು ಬಂತು ಎಂದು ವಿದ್ಯಾರ್ಥಿ ಅರ್ಜಿಯಲ್ಲಿ ಹೇಳಿದ್ದಾರೆ.
ವಿದ್ಯಾರ್ಥಿ ತಕ್ಷಣವೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಇಮೇಲ್ ಮೂಲಕ ದೂರು ನೀಡಿದ್ದು,ತಮಗೆ ಯಾವುದೇ ಸೂಕ್ತ ಮತ್ತು ತೃಪ್ತಿದಾಯಕ ಉತ್ತರ ಬರಲಿಲ್ಲ ಎಂದಿದ್ದಾರೆ.
ನಂತರ ಅವರು ದಿಲ್ಲಿಯಲ್ಲಿರುವ ಸಂಸ್ಥೆಯ ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿ ತಮಗೆ ಸಂಬಂಧಿಸದ ಬೇರೊಬ್ಬರ ಉತ್ತರ ಪತ್ರಿಕೆಯನ್ನು ತೋರಿಸಲಾಯಿತು. ಸಮಸ್ಯೆಯನ್ನು ತನಿಖೆ ಮಾಡುವ ಬದಲು, ಸಿಸ್ಟಂನಲ್ಲಿ ಲಭ್ಯವಿರುವ ಒಎಂಆರ್ ಶೀಟ್ ಒಂದೇ ಎಂದು ಹಾಗೂ ನೀವು ನ್ಯಾಯಾಲಯಕ್ಕೆ ಹೋದರೂ ಇದೇ ಒಎಂಆರ್ ಶೀಟ್ ಅನ್ನೇ ಅಲ್ಲಿಗೂ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು ಎಂದು ಅರ್ಜಿಯಲ್ಲಿ ದೂರಲಾಗಿದೆ.
ಇದರಿಂದ ನೊಂದ ವಿದ್ಯಾರ್ಥಿ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಮೂಲ ಉತ್ತರ ಪತ್ರಿಕೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಂಸ್ಥೆಗೆ ನಿರ್ದೇಶನ ನೀಡಬೇಕೆಂದು ಕೋರಿದರು. ನ್ಯಾಯಾಲಯವು ಸಂಸ್ಥೆಗೆ ಸೂಚನೆ ನೀಡಿತು, ಅದರಂತೆ ಜುಲೈ 3 ರಂದು ಸಂಸ್ಥೆಯು ದಾಖಲೆಗಳನ್ನು ಸಲ್ಲಿಸಿತು.
ಈ ದಾಖಲೆಗಳನ್ನು ಪರಿಶೀಲಿಸಿದಾಗ, ಹಿಂದೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದ ದಾಖಲೆಗಳಿಗೂ ಇದಕ್ಕೂ ವ್ಯತ್ಯಾಸವಿರುವುದು ಕಂಡುಬಂತು. ಇದು ದಾಖಲೆಗಳ ನಂಬಿಕಾರ್ಹತೆ ಮತ್ತು ಸತ್ಯಾಸತ್ಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ವಿದ್ಯಾರ್ಥಿಯ ಪರ ವಕೀಲ ವಿನೀತ್ ಜಿಂದಾಲ್ scroll.inಗೆ ತಿಳಿಸಿದ್ದಾರೆ.
ಜುಲೈ 31 ರಂದು, ಈ ಫಲಿತಾಂಶದ ವಿರುದ್ಧ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮೇಲೆ ಕಾನೂನು ಹೋರಾಟ ಮುಂದುವರಿಸಲು ನ್ಯಾಯಾಲಯವು ವಿದ್ಯಾರ್ಥಿಗೆ ಅನುಮತಿ ನೀಡಿತು.
ಮರುಪರೀಕ್ಷೆ ಬರೆದ ಇತರ ವಿದ್ಯಾರ್ಥಿಗಳೊಂದಿಗೂ scroll.in ಜೊತೆ ಮಾತನಾಡಿದ್ದು, ಅವರಿಗೂ ಇಂಥದ್ದೇ ತಾಂತ್ರಿಕ ತೊಂದರೆಗಳು ಮತ್ತು ಎಡವಟ್ಟುಗಳು ಎದುರಾಗಿರುವುದು ತಿಳಿದುಬಂದಿದೆ. ವಿದ್ಯಾರ್ಥಿಗಳ ಈ ಅನುಭವಗಳನ್ನು ನೋಡಿದರೆ, ಮರುಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ ಎಂಬ ಸರ್ಕಾರದ ಹೇಳಿಕೆಗಳು ತಪ್ಪಾಗಿರುವ ಸಾಧ್ಯತೆಯಿದೆ. ಅಲ್ಲದೆ ಹಲವು ಅಭ್ಯರ್ಥಿಗಳು ತಮ್ಮ ಭವಿಷ್ಯದ ಕುರಿತು ತೀವ್ರ ಆತಂಕದಲ್ಲಿದ್ದಾರೆ.
►ಸಾಲು ಸಾಲು ಸಮಸ್ಯೆಗಳು, ಸಿಗದ ಉತ್ತರಗಳು:
ಹೆಸರು ಹೇಳಲಿಚ್ಛಿಸದ ಉತ್ತರ ಭಾರತದ ವಿದ್ಯಾರ್ಥಿಯೊಬ್ಬರು ತಮಗಾದ ಅನುಭವವನ್ನು ʼಸ್ಕ್ರಾಲ್ʼ ಜತೆ ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಸ್ಕ್ಯಾನ್ ಮಾಡಿದ ಪ್ರತಿಯನ್ನು ಆನಂತರ ಸುಲಭವಾಗಿ ಗುರುತಿಸಲು ಅವರು ತಮ್ಮ ಉತ್ತರ ಪತ್ರಿಕೆಯ ಮೇಲ್ಭಾಗದಲ್ಲಿ ಮೂರು ಚುಕ್ಕೆಗಳನ್ನು ಇಟ್ಟಿದ್ದರು. ಆದರೆ ಪೋರ್ಟಲ್‌ನಲ್ಲಿ ಕಾಣಿಸಿದ ಸ್ಕ್ಯಾನ್ ಪ್ರತಿಯಲ್ಲಿ ಆ ಚುಕ್ಕೆಗಳೇ ಇರಲಿಲ್ಲ. "ಆ ಉತ್ತರ ಪತ್ರಿಕೆ ನನ್ನದೇ ಎಂದು ಖಚಿತಪಡಿಸಿಕೊಳ್ಳಲು ನಾನು ಆ ಚುಕ್ಕೆಗಳನ್ನು ಇಟ್ಟಿದ್ದೆ" ಎಂದು ಅವರು ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೆ, ಆನ್‌ಲೈನ್‌ನಲ್ಲಿದ್ದ ಸ್ಕ್ಯಾನ್ ಪ್ರತಿಯಲ್ಲಿ ಗುರುತಿಸಿ ಮೌಲ್ಯಮಾಪನ ಮಾಡಲಾಗಿದ್ದ ಉತ್ತರಗಳು, ತಾವು ಪರೀಕ್ಷೆಯಲ್ಲಿ ಬರೆದಿದ್ದ ಉತ್ತರಗಳಿಗೆ ತಾಳೆಯಾಗುತ್ತಿರಲಿಲ್ಲ. "ನಾನು ಉತ್ತರ ಕೀಲಿಯನ್ನು ಪರಿಶೀಲಿಸಿ 679 ಅಂಕಗಳು ಬರಬಹುದು ಎಂದು ಲೆಕ್ಕ ಹಾಕಿದ್ದೆ. ಆದರೆ ಪೋರ್ಟಲ್‌ನಲ್ಲಿರುವ ಒಎಂಆರ್ ಶೀಟ್‌ನಲ್ಲಿ ಕೇವಲ 179 ಅಂಕಗಳನ್ನು ತೋರಿಸಲಾಗುತ್ತಿದೆ" ಎಂದು ಅವರು ದೂರಿದ್ದಾರೆ.
ಅವರು ಮತ್ತೊಂದು ವ್ಯತ್ಯಾಸವನ್ನೂ ಗಮನಿಸಿದ್ದರು. "ಪರೀಕ್ಷಾ ಪತ್ರಿಕೆಯಲ್ಲಿ ಯಾವುದೇ ವಿವರಗಳನ್ನು ತಿದ್ದಿ ಬರೆಯಬಾರದು ಎಂದು ನಮಗೆ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ ನನ್ನ ಒಎಂಆರ್ ಶೀಟ್‌ನಲ್ಲಿ ಯಾರೋ ನನ್ನ ಹೆಸರಿನ ಮೇಲೆ ತಿದ್ದಿ ಬರೆಯಲು ಯತ್ನಿಸಿದಂತೆ ಕಾಣುತ್ತಿದೆ. ಅಲ್ಲದೆ ನನ್ನ ಕೈಬರಹವನ್ನು ಅನುಕರಿಸಲು ಯಾರೋ ಪ್ರಯತ್ನಿಸಿದಂತಿದೆ" ಎಂದು ವಿದ್ಯಾರ್ಥಿ ಹೇಳಿದ್ದಾರೆ.
ಇವರೂ ಸಹ ಈ ಎಡವಟ್ಟುಗಳ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ದೂರು ನೀಡಿದ್ದಾರೆ, ಆದರೆ ಅಲ್ಲಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ದಿಲ್ಲಯ ಮತ್ತೊಬ್ಬ ವಿದ್ಯಾರ್ಥಿಯೂ ತಮ್ಮ ಹೆಸರು ಪ್ರಕಟಿಸದಂತೆ ಕೋರಿ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಫಲಿತಾಂಶ ಪ್ರಕಟವಾದಾಗ ವೆಬ್‌ಸೈಟ್‌ನ ತಾಂತ್ರಿಕ ತೊಂದರೆಯಿಂದಾಗಿ ಅವರಿಗೆ ಫಲಿತಾಂಶ ನೋಡಲು ಸಾಧ್ಯವಾಗಲಿಲ್ಲ. ಅವರ ಪರವಾಗಿ ಸ್ನೇಹಿತರೊಬ್ಬರು ಲಾಗಿನ್ ಆದಾಗ, ಅಲ್ಲಿ ಎರಡು ವಿಭಿನ್ನ ಅಂಕಗಳಿದ್ದ ಎರಡು ಸ್ಕೋರ್ ಕಾರ್ಡ್‌ಗಳು ಕಾಣಿಸಿಕೊಂಡು ಗೊಂದಲ ಮೂಡಿಸಿದ್ದವು. "ಒಂದು ಸ್ಕೋರ್ ಕಾರ್ಡ್‌ನಲ್ಲಿ ನನ್ನ ವರ್ಗವನ್ನು ಸಾಮಾನ್ಯ (General) ಎಂದು ತೋರಿಸಿ 343 ಅಂಕ ನೀಡಲಾಗಿತ್ತು. ಮತ್ತೊಂದರಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಅಡಿಯಲ್ಲಿ 133 ಅಂಕಗಳನ್ನು ತೋರಿಸಲಾಗಿತ್ತು. ಇದನ್ನು ಕಂಡು ನನಗೆ ತೀವ್ರ ಗೊಂದಲವಾಯಿತು" ಎಂದು ವಿದ್ಯಾರ್ಥಿ ಹೇಳಿದ್ದಾರೆ.
ಮರುದಿನ ಆ ವಿದ್ಯಾರ್ಥಿ ಮತ್ತೆ ಲಾಗಿನ್ ಆದಾಗ, ಒಂದು ಸ್ಕೋರ್ ಕಾರ್ಡ್ ಕಣ್ಮರೆಯಾಗಿತ್ತು. ಕಡಿಮೆ ಅಂಕಗಳಿದ್ದ ಸ್ಕೋರ್ ಕಾರ್ಡ್ ಮಾತ್ರ ಕಾಣಿಸುತ್ತಿತ್ತು. ವಿದ್ಯಾರ್ಥಿ ತಕ್ಷಣವೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸ್ಪಷ್ಟನೆ ಕೋರಿ ಇಮೇಲ್ ಕಳುಹಿಸಿದರೂ, ಇನ್ನೂ ಯಾವುದೇ ಉತ್ತರ ಬಂದಿಲ್ಲ.
ಈ ತಾಂತ್ರಿಕ ಎಡವಟ್ಟುಗಳ ಆತಂಕದ ಜೊತೆಗೆ, ವಿದ್ಯಾರ್ಥಿ ಧೃತಿಗೆಟ್ಟಿದ್ದಾರೆ. ಏಕೆಂದರೆ ಮೇ ತಿಂಗಳಲ್ಲಿ ನಡೆದಿದ್ದ ಮೊದಲ ಹಂತದ ಪರೀಕ್ಷೆಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದು, ಸುಮಾರು 525 ಅಂಕಗಳ ನಿರೀಕ್ಷೆಯಲ್ಲಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮರುಪರೀಕ್ಷೆ ಘೋಷಣೆಯಾದಾಗ ನಾನು ತೀವ್ರ ನಿರಾಶೆಗೊಂಡೆ. ಹೀಗಾಗಿ ಎರಡನೇ ಹಂತದ ಪರೀಕ್ಷೆಯನ್ನು ಅಷ್ಟು ಚೆನ್ನಾಗಿ ಬರೆಯಲು ಸಾಧ್ಯವಾಗಲಿಲ್ಲ. ಆದರೂ ಸುಮಾರು 460 ಅಂಕಗಳು ಬರಬಹುದು ಎಂದು ಭಾವಿಸಿದ್ದೆ" ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ತಮ್ಮ ದೂರಿಗೆ ಸ್ಪಂದಿಸಿ ಸಮಸ್ಯೆಯನ್ನು ಪರಿಹರಿಸುತ್ತದೆ ಎಂಬ ಭರವಸೆ ಇಲ್ಲದಿದ್ದರಿಂದ, ಈ ವಿದ್ಯಾರ್ಥಿ ಬಿಎಸ್‌ಸಿ ಕೋರ್ಸ್‌ಗೆ ಸೇರಿಕೊಂಡಿದ್ದಾರೆ.
ಸಂಸ್ಥೆಯು ದೂರುಗಳಿಗೆ ಪ್ರತಿಕ್ರಿಯಿಸಿದ ಕೆಲವು ಪ್ರಕರಣಗಳಲ್ಲೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.
ಮಹಾರಾಷ್ಟ್ರದ ವಿದ್ಯಾರ್ಥಿನಿಯೊಬ್ಬರು ಕಳುಹಿಸಿದ್ದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು 'ಎಕ್ಸ್' ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಪೋರ್ಟಲ್‌ನಲ್ಲಿ ತಮಗೆ ಬಂದಿದ್ದ 190 ಅಂಕಗಳು ನಿರೀಕ್ಷೆಗಿಂತ ಕಡಿಮೆಯಿದ್ದಿದ್ದರಿಂದ, ತಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ಕೋರಿ ಸಂಸ್ಥೆಗೆ ಇಮೇಲ್ ಬರೆದಿದ್ದಾಗಿ ಆ ವಿದ್ಯಾರ್ಥಿನಿ ತಿಳಿಸಿದ್ದಾರೆ. ಸಂಸ್ಥೆಯು ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ ತನಗೆ ಬೇರೊಬ್ಬರ ತಪ್ಪು ಉತ್ತರ ಪತ್ರಿಕೆಯನ್ನು ಕಳುಹಿಸಲಾಗಿತ್ತು ಹಾಗೂ ಪೋರ್ಟಲ್‌ನಲ್ಲೂ ಅದೇ ಉತ್ತರ ಪತ್ರಿಕೆಯನ್ನು ತೋರಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಅವರು ಎರಡನೇ ಬಾರಿಗೆ ಇಮೇಲ್ ಕಳುಹಿಸಿದಾಗ, ಅವರಿಗೆ ಮೂಲ ಉತ್ತರ ಪತ್ರಿಕೆಯನ್ನು ಕಳುಹಿಸಲಾಯಿತು. ಆ ಪತ್ರಿಕೆಯ ಪ್ರಕಾರ ಅವರ ಅಂಕಗಳು 434 ಆಗಿದ್ದವು. ಆದರೆ ವೆಬ್‌ಸೈಟ್‌ನಲ್ಲಿ ಇನ್ನೂ ಮೊದಲಿಗೆ ನೀಡಲಾಗಿದ್ದ ಅಂಕಗಳೇ ಕಾಣಿಸುತ್ತಿದ್ದು, ಈ ತಪ್ಪನ್ನು ಸರಿಪಡಿಸುವ ಕುರಿತು ಸಂಸ್ಥೆಯಿಂದ ತಮಗೆ ಯಾವುದೇ ಉತ್ತರ ಬಂದಿಲ್ಲ ಎಂದು ಅವರು ದೂರಿದ್ದಾರೆ.
►ಸಂಸ್ಥೆಯ ಆನ್‌ಲೈನ್ ಪ್ರತಿಕ್ರಿಯೆ: ಆರೋಪ, ಎಚ್ಚರಿಕೆ ಮತ್ತು ವಿದ್ಯಾರ್ಥಿಗಳ ಆತಂಕ
ಕೆಲವು ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ವಿದ್ಯಾರ್ಥಿಗಳ ಪೋಸ್ಟ್‌ಗಳಿಗೆ ಉತ್ತರಿಸುವಾಗ ಸ್ವಲ್ಪ ಆಕ್ರಮಣಕಾರಿ ಧೋರಣೆಯನ್ನು ತೋರಿದೆ. ಕೃತಕ ಬುದ್ಧಿಮತ್ತೆ ಬಳಸಿ ತಿರುಚಲಾದ ಅಂಕಪಟ್ಟಿಗಳನ್ನು ಬಳಸಿ ಕೆಲವು ವಿದ್ಯಾರ್ಥಿಗಳು ದೂರುಗಳನ್ನು ನೀಡುತ್ತಿದ್ದಾರೆ ಎಂಬ ವಾದವನ್ನು ಅದು ಪುನರುಚ್ಛರಿಸಿದೆ.
"ಕೆಲವು ವಿದ್ಯಾರ್ಥಿಗಳು ಎಐ ಬಳಸಿ ತಿರುಚಿದ ಅಂಕಪಟ್ಟಿಗಳನ್ನು ಕಳುಹಿಸಿ, ತಮಗೆ ತಪ್ಪಾದ ಅಂಕಗಳನ್ನು ನೀಡಲಾಗಿದೆ ಎಂದು ದೂರು ನೀಡಿದ್ದಾರೆ ಎಂದು ಎನ್‌ಟಿಎ 'ಎಕ್ಸ್'ನಲ್ಲಿ ಪ್ರಕಟಿಸಿದೆ" ಎಂದು ಉತ್ತರ ಭಾರತದ ರಾಜ್ಯದ ವಿದ್ಯಾರ್ಥಿಯೊಬ್ಬರು ದೂರಿದ್ದಾರೆ. "ಅದರ ನಂತರ, ಎಐ ಸೃಷ್ಟಿಸಿದ ಅಂಕಪಟ್ಟಿಗಳನ್ನು ಕಳುಹಿಸುವುದರ ವಿರುದ್ಧ ಎನ್‌ಟಿಎ ಕಠಿಣ ಎಚ್ಚರಿಕೆ ನೀಡಿದೆ. ಆದರೆ ನನ್ನಂತಹ ನಿಜವಾದ ಸಮಸ್ಯೆ ಎದುರಿಸುತ್ತಿರುವವರೂ ಇದ್ದಾರೆ, ಆದರೂ ಸಂಸ್ಥೆ ಇನ್ನೂ ಇದಕ್ಕೆ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.
'ಎಕ್ಸ್' ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಸಂಸ್ಥೆಯು, ತಮ್ಮ ಆತಂಕಗಳನ್ನು ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದ ಐವರು ವಿದ್ಯಾರ್ಥಿಗಳ ದೂರುಗಳಿಗೆ ಪ್ರತಿಕ್ರಿಯಿಸಿದೆ. ಆ ಪೋಸ್ಟ್‌ಗಳಲ್ಲಿ ವಿದ್ಯಾರ್ಥಿಗಳ ಹೆಸರು ಮತ್ತು ಅರ್ಜಿ ಸಂಖ್ಯೆಯನ್ನು ನಮೂದಿಸಿರುವ ಸಂಸ್ಥೆ, ಆ ವಿದ್ಯಾರ್ಥಿಗಳು ಹಂಚಿಕೊಂಡಿದ್ದ ಒಎಂಆರ್ ಶೀಟ್‌ಗಳು "ಅಸಲಿ ಒಎಂಆರ್ ಶೀಟ್‌ನ ಡಿಜಿಟಲೀ ತಿರುಚಿದ ಪ್ರತಿಗಳಾಗಿವೆ" ಎಂದಿದೆ.
ಮತ್ತೊಂದು ಪೋಸ್ಟ್ ನಲ್ಲಿ "ಪರಿಶೀಲನೆಗಾಗಿ ಸಲ್ಲಿಸಲಾದ ಹಲವು ಒಎಂಆರ್ ಶೀಟ್‌ಗಳು ನಕಲಿ ಅಥವಾ ಎಐಯಿಂದ ರಚಿಸಿದ್ದು ಎಂದು ಕಂಡುಬಂದಿರುವುದರಿಂದ, ಪರಿಶೀಲನೆಗೆ ಅಸಲಿ ಒಎಂಆರ್ ಶೀಟ್‌ಗಳನ್ನು ಮಾತ್ರ ಸಲ್ಲಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸೂಚಿಸಲಾಗಿದೆ. ಯಾವುದೇ ನಕಲಿ ಅಥವಾ ಎಐ ರಚಿತ ಒಎಂಆರ್ ಶೀಟ್ ದೂರುದಾರರ ವಿರುದ್ಧ ಕಾನೂನು ಕ್ರಮಕ್ಕೆ ದಾರಿ ಮಾಡಿಕೊಡಬಹುದು ಎಂದು ಹೇಳಲಾಗಿದೆ. 'ಎಕ್ಸ್'ನ ಕೆಲವು ಬಳಕೆದಾರರು ಈ ಪೋಸ್ಟ್‌ಗಳಿಗೆ ಬೆದರಿಕೆ ಹಾಗೂ ನಿಂದನಾತ್ಮಕ ಸಂದೇಶಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಅಂಕಗಳ ಕುರಿತು ಆತಂಕಗೊಂಡು ಸುಮಾರು 40 ವಿದ್ಯಾರ್ಥಿಗಳು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ವಕೀಲ ಜಿಂದಾಲ್ ತಿಳಿಸಿದ್ದಾರೆ. ಆದರೆ ಕೇವಲ ಮೂರು ವಿದ್ಯಾರ್ಥಿಗಳು ಮಾತ್ರ ಕಾನೂನು ಹೋರಾಟದ ಬಗ್ಗೆ ಯೋಚಿಸಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಿರುಕುಳಕ್ಕೊಳಗಾಗುವ ಭೀತಿಯಿಂದಾಗಿ ತಮ್ಮ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಹೆದರುತ್ತಿದ್ದಾರೆ .ಅಲ್ಲದೆ, ಕಾನೂನು ಕ್ರಮ ಕೈಗೊಂಡರೆ ತಮ್ಮ ವೃತ್ತಿಜೀವನದ ಭವಿಷ್ಯಕ್ಕೆ ಹಾನಿಯಾಗಬಹುದು ಎಂಬ ಆತಂಕವೂ ಅವರಲ್ಲಿದೆ. ಎನ್‌ಟಿಎ ಎಚ್ಚರಿಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಪ್ರತಿಕ್ರಿಯೆಯನ್ನು ನೋಡಿದ ನಂತರ, ವಿದ್ಯಾರ್ಥಿಗಳು ಧೈರ್ಯವಾಗಿ ಮುಂದೆ ಬರಲು ಅಥವಾ ಕಾನೂನು ಹೋರಾಟ ಮುಂದುವರಿಸಲು ಹೆದರುತ್ತಿದ್ದಾರೆ ಎಂದಿದ್ದಾರೆ ಜಿಂದಾಲ್.

