ತಿರುವನಂತಪುರಂ: 'ವಂದೇಮಾತರಂ' ಗೀತೆ ಹಾಡದವರಿಗೆ ತಮ್ಮ ತಾಯಿ ಯಾರೆಂಬುದೇ ತಿಳಿದಿಲ್ಲ ಎಂದು ಕೇರಳ ವಿಶ್ವವಿದ್ಯಾಲಯದ ಉಪ ಕುಲಪತಿ ಮೋಹನನ್ ಕುನ್ನುಮ್ಮಲ್ ಹೇಳಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ತಿರುವನಂತಪುರಂನ ಮನಿವಿಲದಲ್ಲಿ ಶನಿವಾರ ನಡೆದ ಖSSನ 'ಸಂಕಲ್ಪ 2026 ಯುವ ಸಂಗ್ರಾಮ' ಯುವ ಸಭೆಯಲ್ಲಿ ಮಾತನಾಡಿದ ಕುನ್ನುಮ್ಮಲ್, ಮಕ್ಕಳನ್ನು ಪೋಷಕರಿಗೆ ವಹಿಸಿಕೊಟ್ಟಿರುವುದು ಭಾರತ ಮಾತೆ ಎಂದು ಹೇಳಿದರು.
'ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಈ ಮಕ್ಕಳನ್ನು ನಿಮ್ಮ ಮನೆಗಳಲ್ಲಿ ಇಡಲಾಗಿದೆ. ಅವರನ್ನು ಪ್ರತಿಭಾವಂತ ಮಕ್ಕಳನ್ನಾಗಿ ಹಾಗೂ ಅನುಕರಣೀಯ ಪ್ರಜೆಗಳನ್ನಾಗಿ ಬೆಳೆಸುವ ಜವಾಬ್ದಾರಿಯನ್ನು ಕುಟುಂಬದ ಪ್ರತಿಯೊಬ್ಬ ಪುರುಷ ಮತ್ತು ಮಹಿಳಾ ಮುಖ್ಯಸ್ಥರಿಗೆ ವಹಿಸಲಾಗಿದೆ. ಈ ಮಾತು ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಇನ್ನೂ ಹೆಚ್ಚು ಅನ್ವಯಿಸುತ್ತದೆ. ಏಕೆಂದರೆ, ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ನಮ್ಮ ತಾಯಿ' ಎಂದು ಅವರು ಹೇಳಿದರು.
ಹೀಗಾಗಿಯೇ ದೇಶವನ್ನು ಭಾರತ ಮಾತೆ ಎಂದು ಕರೆಯಲಾಗುತ್ತದೆ ಎಂದ ಅವರು, 'ನಾವು ಪ್ರಾರ್ಥನೆ ಮಾಡುವಾಗ ವಂದೇಮಾತರಂ ಎನ್ನುತ್ತೇವೆ. ಅದು ನಮ್ಮ ತಾಯಿ. ಹೀಗಾಗಿಯೇ ನಾವು ವಂದೇಮಾತರಂ ಎಂದು ಹೇಳುತ್ತೇವೆ ಮತ್ತು ಹಾಡುತ್ತೇವೆ. ತಮ್ಮ ತಾಯಿ ಯಾರೆಂದು ತಿಳಿಯದವರು ವಂದೇಮಾತರಂ ಗೀತೆಯನ್ನು ವಿರೋಧಿಸುತ್ತಾರೆ. ಇದನ್ನು ಹೀಗೆಯೇ ಹೇಳಬೇಕಿದೆ' ಎಂದರು.
ವಿದ್ಯಾರ್ಥಿ ಸಂಘಟನೆಗಳ ಖಂಡನೆ
ಕುನ್ನುಮ್ಮಲ್ ಅವರ ಹೇಳಿಕೆಯನ್ನು ವಿದ್ಯಾರ್ಥಿ ಸಂಘಟನೆಗಳಾದ SFI ಮತ್ತು KSU ಖಂಡಿಸಿವೆ. ಕೇರಳ ವಿಶ್ವವಿದ್ಯಾಲಯದಲ್ಲಿ RSSನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಕುನ್ನುಮ್ಮಲ್ ಪ್ರಯತ್ನಿಸುತ್ತಿದ್ದಾರೆ ಎಂದು ಅವು ಆರೋಪಿಸಿವೆ.
ಕುನ್ನುಮ್ಮಲ್ ಅವರನ್ನು ಕೇರಳ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಿದ ರಾಜ್ಯಪಾಲರ ಕ್ರಮವನ್ನು LDF ಮತ್ತು UDF ಎರಡೂ ಪ್ರಶ್ನಿಸಿದ್ದವು. ಈ ನೇಮಕವು ಕೇರಳದ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸುವ ಪ್ರಯತ್ನವಾಗಿದೆ ಎಂದು ಅವು ಆಕ್ಷೇಪಿಸಿದ್ದವು.

