ನವದೆಹಲಿ: ರಾಷ್ಟ್ರೀಯ ಶೇರು ವಿನಿಮಯ ಕೇಂದ್ರವು (ಎನ್‌ಎಸ್‌ಇ) ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿಯಲ್ಲಿ 'ಸಾರ್ವಜನಿಕ ಪ್ರಾಧಿಕಾರ'ವಾಗಿದೆ ಎಂದು ಎತ್ತಿ ಹಿಡಿದಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ತಡೆ ನೀಡಿದೆ.
ಎನ್‌ಎಸ್‌ಇ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಸಮ್ಮತಿಸಿದ ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು,ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಮತ್ತು ಇತರರಿಗೆ ನೋಟಿಸ್‌ಗಳನ್ನು ಹೊರಡಿಸಿತು.
ಪೀಠವು ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳ ನಂತರ ನಿಗದಿಪಡಿಸಿದೆ.
ದಿಲ್ಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಜುಲೈ 1ರ ತೀರ್ಪನ್ನು ಎನ್‌ಎಸ್‌ಇ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ.
ಎನ್‌ಎಸ್‌ಇ ಅನ್ನು ಆರ್‌ಟಿಐ ಕಾಯ್ದೆಯ ಸೆಕ್ಷನ್ ಕಲಂ 2(ಎಚ್) ಅಡಿ 'ಸಾರ್ವಜನಿಕ ಪ್ರಾಧಿಕಾರ' ಎಂದು ಪರಿಗಣಿಸಿದ್ದ ಏಕಸದಸ್ಯ ಪೀಠದ ಏಪ್ರಿಲ್ 2010ರ ನಿರ್ಧಾರವನ್ನು ಎತ್ತಿಹಿಡಿದಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಎನ್‌ಎಸ್‌ಇ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತ್ತು.
ಆರ್‌ಟಿಐ ಕಾಯ್ದೆಯಡಿಯಲ್ಲಿ ನಾಗರಿಕರು 'ಸಾರ್ವಜನಿಕ ಪ್ರಾಧಿಕಾರ'ದಿಂದ ಮಾತ್ರ ಮಾಹಿತಿ ಕೇಳುವ ತಮ್ಮ ಹಕ್ಕನ್ನು ಚಲಾಯಿಸಬಹುದು.
ಸರಕಾರವು ಯಾವುದಾದರೂ ಸಂಸ್ಥೆಯ ಸ್ವಾಮ್ಯವನ್ನು ಹೊಂದಿದ್ದರೆ, ನಿಯಂತ್ರಿಸುತ್ತಿದ್ದರೆ ಅಥವಾ ಅದಕ್ಕೆ ಗಣನೀಯವಾಗಿ ಹಣಕಾಸಿನ ನೆರವು ನೀಡುತ್ತಿದ್ದರೆ, ಅದು 'ಸಾರ್ವಜನಿಕ ಪ್ರಾಧಿಕಾರ' ಎಂದು ಪರಿಗಣಿಸಲು ಅರ್ಹವಾಗುತ್ತದೆ ಎಂದು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಹೇಳಿತ್ತು.
ಎನ್‌ಎಸ್‌ಇ ತಾನು ಆರ್‌ಟಿಐ ಕಾಯ್ದೆಯಡಿ 'ಸಾರ್ವಜನಿಕ ಪ್ರಾಧಿಕಾರ'ವಲ್ಲ ಎಂದು ಪ್ರತಿಪಾದಿಸಿ ಕೇಂದ್ರ ಮಾಹಿತಿ ಆಯುಕ್ತರ ಆದೇಶವನ್ನು ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿತ್ತು.

