ಜಿನೀವಾ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದ ಕಾಂಗೋದಲ್ಲಿ (ಡಿ ಆರ್ ಕಾಂಗೋ) ಪ್ರಸ್ತುತ ಹರಡುತ್ತಿರುವ ಎಬೋಲಾ ರೋಗವು ಆರೋಗ್ಯ ಅಧಿಕಾರಿಗಳ ನಿಯಂತ್ರಣಕ್ಕೂ ಮೀರಿದ ವೇಗದಲ್ಲಿ ಹರಡುತ್ತಿದ್ದು, ಇದು ಇತಿಹಾಸದಲ್ಲೇ ಅತ್ಯಂತ ಮಾರಕವಾದ ಸಾಂಕ್ರಾಮಿಕ ರೋಗವಾಗುವ ಹಾದಿಯಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಪ್ರಸ್ತುತ ಹರಡುತ್ತಿರುವ ವೇಗವನ್ನು ನೋಡಿದರೆ, ಈ ಸಾಂಕ್ರಾಮಿಕವು 2014ರಿಂದ 2016ರ ಅವಧಿಯಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಸಂಭವಿಸಿದ ಎಬೋಲಾ ರೋಗದ ತೀವ್ರತೆಯನ್ನು ಮೀರಿಸುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅದಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಪಶ್ಚಿಮ ಆಫ್ರಿಕಾದಲ್ಲಿ ಸಂಭವಿಸಿದ್ದ ದುರಂತದಲ್ಲಿ 11,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಮತ್ತು ಅದು ಲಸಿಕೆ ಅಭಿವೃದ್ಧಿಗೆ ವೇಗ ನೀಡಲು ಕಾರಣವಾಗಿತ್ತು.
ಪೂರ್ವ ಕಾಂಗೋದಲ್ಲಿ ಹರಡುತ್ತಿರುವ ಈ ರೋಗದಲ್ಲಿ ಇದುವರೆಗೆ 4,300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 2,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ರೋಗವು 'ಬಂಡಿಬುಗ್ಯೊ' ಎಂಬ ಅಪರೂಪದ ವೈರಸ್ ತಳಿಯಿಂದ ಹರಡುತ್ತಿದ್ದು, ಇದಕ್ಕೆ ಇನ್ನು ಯಾವುದೇ ಲಸಿಕೆ ಅಥವಾ ಚಿಕಿತ್ಸೆಯನ್ನು ಅನುಮೋದಿಸಲಾಗಿಲ್ಲ.
ಈ ರೋಗದ ತೀವ್ರತೆಯು ಮುಂದಿನ ಆರು ತಿಂಗಳೊಳಗೆ ಗರಿಷ್ಠ ಮಟ್ಟವನ್ನು ತಲುಪಬಹುದು. ಇನ್ನು ತೀವ್ರತರವಾದ ಪರಿಸ್ಥಿತಿ ನಿರ್ಮಾಣವಾದರೆ, ಇದು 9ರಿಂದ 12 ತಿಂಗಳವರೆಗೆ ಮುಂದುವರಿಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
► ಅರ್ವೆಬೋ ಲಸಿಕೆಯ ಪ್ರಯೋಗಕ್ಕೆ ಶಿಫಾರಸು
ಕಾಂಗೋ ಗಣರಾಜ್ಯದಲ್ಲಿ ಹರಡುತ್ತಿರುವ ಎಬೋಲಾ ವೈರಸ್ ತಳಿಯ ವಿರುದ್ಧ ಪ್ರಸ್ತುತ ಅನುಮೋದನೆ ಪಡೆದಿರುವ ಏಕೈಕ ಎಬೋಲಾ ಲಸಿಕೆಯು ರಕ್ಷಣೆ ನೀಡುತ್ತದೆಯೇ ಎಂಬುದನ್ನು ಪರಿಶೀಲಿಸಲು, ಅದರ ಪೂರ್ಣ ಪ್ರಮಾಣದ ಮಾನವ ಪ್ರಯೋಗವನ್ನು ನಡೆಸುವಂತೆ ವಿಶ್ವ ಆರೋಗ್ಯ ಸಂಸ್ಥೆಯ ಲಸಿಕಾ ತಜ್ಞರು ಶಿಫಾರಸು ಮಾಡಿದ್ದಾರೆ.
ಅರ್ವೆಬೋ ಲಸಿಕೆಯು ಅತ್ಯಂತ ಸಾಮಾನ್ಯವಾದ 'ಜೈರೆ' ಎಬೋಲಾ ವೈರಸ್ ತಳಿಯ ವಿರುದ್ಧ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಲಸಿಕೆಯು ಕಾಂಗೋದಲ್ಲಿ ತೀವ್ರವಾಗಿ ಹರಡುತ್ತಿರುವ ಅಪರೂಪದ ಬುಂಡಿಬುಗ್ಯೊ ತಳಿಯ ವಿರುದ್ಧವೂ ಸ್ವಲ್ಪಮಟ್ಟಿನ ರಕ್ಷಣೆ ನೀಡಬಹುದು ಎಂದು ಲಸಿಕಾ ತಜ್ಞರು ತಿಳಿಸಿದ್ದಾರೆ.

