ನವದೆಹಲಿ: ನಾಲ್ವರು, 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಬಯಲು ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬಾಲಕಿ ಟೆಂಪೊದಲ್ಲಿ ಅವರೊಂದಿಗೆ ತೆರಳಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿತರಲ್ಲಿ ಮೂವರು ಅಪ್ರಾಪ್ತ ವಯಸ್ಸಿನವರು.
ಮೃತದೇಹ ಕೊಳೆತು ಹೋಗಿದ್ದರಿಂದ, ಅದರ ಲಿಂಗವನ್ನೂ ತಕ್ಷಣ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಹಾಗೂ ಆರೋಪಿಗಳು ಪರಿಚಯಸ್ಥರು. ಟೆಂಪೊದಲ್ಲಿಯೇ ಮದ್ಯಪಾನ ಮಾಡಿ, ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿ, ಬಯಲು ಪ್ರದೇಶದಲ್ಲಿ ಎಸೆದಿದ್ದಾರೆ.
ಸೆ. 13ರಂದು ಕುಶಕ್ ರಸ್ತೆಯ ಜೈಪಾಲ್ ರಾಣಾ ಅವರ ಜಮೀನಿನ ಸಮೀಪ ಕೊಳೆತ ಸ್ಥಿತಿಯಲ್ಲಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಕೆಲವು ಭಾಗಗಳನ್ನು ಬೀದಿ ನಾಯಿಗಳು ತಿಂದಿದ್ದವು. ಒಂದು ಕೈ ದೇಹದಿಂದ ಬೇರ್ಪಟ್ಟಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.
ಬಾಲಕಿ ನಾಪತ್ತೆಯಾದ ಬಗ್ಗೆ ಮನೆಯವರಿಂದ ಯಾವುದೇ ದೂರು ದಾಖಲಾಗಿರಲಿಲ್ಲ. ಮನೆಯಿಂದ ಹೋದರೆ ಕೆಲವು ದಿನಗಳ ಬಳಿಕ ಬರುವುದು ರೂಢಿಯಾಗಿದ್ದರಿಂದ ದೂರು ನೀಡಿರಲಿಲ್ಲ ಎಂದು ಪೋಷಕರು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಎನ್‌ಎಸ್ ಹಾಗೂ ಪೋಕ್ಸೊ ಕಾಯ್ದೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ಪ್ರತ್ಯಕ್ಷ ಸಾಕ್ಷಿಗಳು ಯಾರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಆರಂಭದಲ್ಲಿ ಆರೋಪಿಗಳ ಗುರುತು ಸಿಕ್ಕಿರಲಿಲ್ಲ. ಹೀಗಾಗಿ ಪೊಲೀಸರು ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಮಾರ್ಗಗಳಲ್ಲಿದ್ದ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ಈ ವೇಳೆ ಘಟನಾ ಸ್ಥಳದ ಬಳಿ ಟೆಂಪೊವೊಂದು ಸಂಚರಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಕತ್ತಲಿದ್ದ ಕಾರಣ ಟೆಂಪೊದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಗೋಚರಿಸದ ಕಾರಣ, ಪೊಲೀಸರು ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಟೆಂಪೊದ ಜಾಡು ಹಿಡಿದಿದ್ದಾರೆ.
ಸೆ. 15-16ರ ನಡುವಿನ ರಾತ್ರಿ ಪೂರ್ತಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಶಂಕಿತ ಟೆಂಪೊವನ್ನು ಸ್ವರೂಪ್ ನಗರ ಪ್ರದೇಶದ ಖಡ್ಡಾ ಕಾಲೊನಿಯಲ್ಲಿ ಪತ್ತೆಹಚ್ಚಿದ್ದಾರೆ. ಅದರ ಚಾಲಕನನ್ನು ಗುರುತಿಸಿ ವಿಚಾರಣೆ ನಡೆಸಿದ್ದಾರೆ.
ತನಿಖೆ ಮುಂದುವರಿದಂತೆ ಪ್ರಕರಣಕ್ಕೆ ಸಂಬಂಧ ಮೂವರು ಬಾಲಕರು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಯಿತು.
ಖಡ್ಡಾ ಕಾಲೊನಿ ನಿವಾಸಿ ಶಿವಂ ಅಲಿಯಾಸ್ ಸುಧಾಮ ಅಲಿಯಾಸ್ ಚುಚು ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಮೂವರು ಬಾಲಕರ ವಯಸ್ಸು 16 ಮತ್ತು 17 ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಎರಡು ಚಾಕುಗಳು, ಆರೋಪಿಗಳು ಧರಿಸಿದ್ದರು ಎನ್ನಲಾದ ಬಟ್ಟೆಗಳು ಹಾಗೂ ಟೆಂಪೊವನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಗಳ ಕಾಲನುಕ್ರಮವನ್ನು ಪತ್ತೆಹಚ್ಚಲು, ಕೃತ್ಯದಲ್ಲಿ ಆರೋಪಿಗಳ ಪಾತ್ರಗಳನ್ನು ಖಚಿತಪಡಿಸಿಕೊಳ್ಳಲು ಹಾಗೂ ವಿಧಿವಿಜ್ಞಾನ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸುವ ಕೆಲಸ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

