ನವದೆಹಲಿ: ಇಟಲಿಯ ಐಷಾರಾಮಿ ಫ್ಯಾಷನ್ ಉತ್ಪನ್ನಗಳ ಕಂಪನಿ 'ಫೆಂಡಿ' ಇತ್ತೀಚಿಗೆ ₹8.3 ಲಕ್ಷದಿಂದ ₹9 ಲಕ್ಷವರೆಗಿನ ಹ್ಯಾಂಡ್‌ಬ್ಯಾಗ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಬ್ಯಾಗ್ ಸಂಪೂರ್ಣವಾಗಿ ಬಣ್ಣ ಬಣ್ಣದ ಕಸೂತಿ, ಕನ್ನಡಿ, ಮಣಿಗಳಿಂದ ಕೂಡಿದೆ. ಅಲ್ಲದೇ ಥೇಟ್ ಬಂಜಾರ ಸಮುದಾಯದ ಸಾಂಪ್ರದಾಯಿಕ ಬ್ಯಾಗ್‌ಗಳನ್ನೇ ಹೋಲುವಂತಿದೆ.
ನವರಾತ್ರಿ ಸಮಯದಲ್ಲಿ ₹500ಕ್ಕೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಇದೇ ರೀತಿಯ ಬ್ಯಾಗ್‌ಗಳ ಅಂಗಡಿಗಳನ್ನು ಕಾಣಬಹುದು.
ಇದೇ ಕಾರಣಕ್ಕೆ ಸದ್ಯ 'ಫೆಂಡಿ' ಕಂಪನಿಯ ಬ್ಯಾಗ್ ಚರ್ಚೆಗೆ ಗ್ರಾಸವಾಗಿದೆ. ಭಾರತದ ಕಸುಬುದಾರಿಕೆಯಿಂದ ಸ್ಪೂರ್ತಿ ಪಡೆದು, ಯಾವುದೇ ಕ್ರೆಡಿಟ್ ಕೊಡದೆ ಫೆಂಡಿ, ಈ ಬ್ಯಾಗ್‌ಗಳನ್ನು ಬಿಡುಗಡೆ ಮಾಡಿದೆ ಎಂದು ಇತರ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್‌ಗಳು ಆರೋಪಿಸಿವೆ.
ಧ್ವನಿಯೆತ್ತಿದ ಭಾರತದ ಉದ್ಯಮಿಗಳು
ಫೆಂಡಿ ಬ್ಯಾಗ್ ಬಗ್ಗೆ ಆರ್‌ಪಿಜಿ ಗ್ರೂಪ್‌ನ ಮುಖ್ಯಸ್ಥ ಹರ್ಷ್ ಗೋಯೆಂಕಾ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಭಾರತೀಯ ಕುಶಲಕರ್ಮಿಗಳಿಗೆ ಮನ್ನಣೆ ನೀಡದಿರುವ ವಿಷಯವಿದು. 'ಪ್ರಡಾ' ಸಂಸ್ಥೆಯ ಕೊಲ್ಹಾಪುರಿ ಚಪ್ಪಲಿ ವಿವಾದದಂತೆ ಇದು ನಿಜವಾಗಿಯೂ ಸಾಂಸ್ಕೃತಿಕ ಸ್ವಾಧೀನತೆ ಪ್ರಕರಣವೇ, ಅಥವಾ ಇದರ ಹಿಂದೆ ಇನ್ನೂ ಹೆಚ್ಚಿನ ವಿಷಯವಿದೆಯೇ ಎಂದು ಪ್ರಶ್ನೆಯೆತ್ತಿದ್ದಾರೆ.
ಫೆಂಡಿ ಪರಿಚಯಿಸಿದ ಬ್ಯಾಗ್ ಹೇಗಿದೆ?
ಅಧಿಕೃತ ವೆಬ್‌ಸೈಟ್‌ನಲ್ಲಿ ಬ್ಯಾಗ್‌ನ ಬಗ್ಗೆ ಬರೆದುಕೊಂಡಿರುವ ಫೆಂಡಿ, 'ಇದು ಕಸೂತಿ ಮತ್ತು ಕನ್ನಡಿಗಳನ್ನು ಹೊಂದಿರುವ 'ಮಲ್ಟಿಕಲರ್ ರೀ-ಎಡಿಷನ್ ಬ್ಯಾಗ್' ಅಥವಾ 'ಬ್ಯಾಗೆಟ್ 26424' (Baguette 26424) ಆಗಿದೆ. ಇದು 1997ರಲ್ಲಿ ಮೊದಲ ಬಾರಿಗೆ ಪರಿಚಯಿಸಲ್ಪಟ್ಟಿತ್ತು. ಇದೀಗ ಇದರ ಮೂಲ ಆವೃತ್ತಿಯಾದ '26424' ಆಧರಿಸಿ, 'ಫಾಲ್/ವಿಂಟರ್ 2026-27' ಎನ್ನುವ ಹೊಸ ರೂಪದಲ್ಲಿ ಮರುಸೃಷ್ಟಿಸಲಾಗಿದೆ' ಎಂದು ಬರೆದುಕೊಂಡಿದೆ.
'ಈ ಬ್ಯಾಗ್‌ಅನ್ನು ಕೈಗಳ ಮೂಲಕ ರೂಪಿಸಲಾಗಿದೆ. ಇದರಲ್ಲಿ 39,500 ಮಣಿಗಳು ಮತ್ತು 475 ಕನ್ನಡಿಗಳಿವೆ. ಇದನ್ನು ತಯಾರಿಸಲು 138 ಗಂಟೆ ಸಮಯ ಹಿಡಿದೆ. ಈ ಬ್ಯಾಗ್ ಕೇವಲ ಕಸೂತಿಯಿಂದ ಕೂಡಿಲ್ಲ, ಬದಲಾಗಿ ಕರುವಿನ ಚರ್ಮದಿಂದ ತಯಾರಿಸಿದ ಗಾಢ ಕಂದು ಬಣ್ಣದ ಭುಜದ ಪಟ್ಟಿಯನ್ನು ಹೊಂದಿದೆ. ಇದನ್ನು ಇಟಲಿಯಲ್ಲಿ ತಯಾರಿಸಲಾಗಿದೆ' ಎಂದು ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಫೆಂಡಿ, ಇದನ್ನು 'ನವರಾತ್ರಿ ಬ್ಯಾಗ್' ಎಂದು ಹೇಳಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದು 'ನವರಾತ್ರಿ ಬ್ಯಾಗ್' ಎಂದು ಹೆಸರು ಪಡೆದುಕೊಂಡಿದೆ.
ಏಪ್ರಿಲ್‌ನಲ್ಲೇ ವಿಡಿಯೊ ಹಂಚಿಕೊಂಡಿದ್ದ ಫೆಂಡಿ
ಬ್ಯಾಗ್ ತಯಾರಿಕೆಯ ಬಗ್ಗೆ ಕಳೆದ ಏಪ್ರಿಲ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದ ಫೆಂಡಿ, 'ಕಸುಬುದಾರಿಕೆಯು ವಿನ್ಯಾಸವಾಗಿ ಪರಿವರ್ತನೆಗೊಂಡಾಗ, 'ಚಾಣಕ್ಯ'ದ ನುರಿತ ಕುಶಲಕರ್ಮಿಗಳ ಕೈಚಳಕದಿಂದ ಮಣಿಗಳು ಮತ್ತು ಕನ್ನಡಿಗಳು ಹೇಗೆ ವಿಶಿಷ್ಟ ಕಲಾಕೃತಿಗಳಾಗಿ ರೂಪುಗೊಳ್ಳುತ್ತವೆ ಎಂಬುದನ್ನು ಕಂಡುಕೊಳ್ಳಿ' ಎಂದು ಬರೆದುಕೊಂಡಿತ್ತು.
ಅಂದಹಾಗೆ ವರದಿಗಳ ಪ್ರಕಾರ 'ಚಾಣಕ್ಯ ಇಂಟರ್‌ನ್ಯಾಷನಲ್' ಎನ್ನುವುದು ಮುಂಬೈ ಮೂಲದ ಕರಕುಶಲ ಸಂಸ್ಥೆಯಾಗಿದೆ. ಹೀಗಾಗಿ ಇದನ್ನೂ ಭಾರತೀಯರೇ ಸಂಯೋಜನೆಯಲ್ಲಿ ತಯಾರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

