ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿನ ಬಿಕ್ಕಟ್ಟು ತೀವ್ರಗೊಂಡಿದೆ. ನಿಜವಾದ ಟಿಎಂಸಿ ತಮ್ಮದೇ ಎಂದು ಹೋರಾಟ ನಡೆಸುತ್ತಿರುವ ಎರಡೂ ಬಣಗಳಿಗೆ ಚುನಾವಣಾ ಆಯೋಗವು ಹೊಸ ಹೆಸರು ಮತ್ತು ಚಿಹ್ನೆಯನ್ನು ಹಂಚಿಕೆ ಮಾಡಿದೆ.
ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಣಕ್ಕೆ 'ಮಮತಾ ಅಖಿಲ ಭಾರತ ತೃಣಮೂಲ ಕಾಂಗ್ರೆಸ್' ಎಂಬ ಹೆಸರು ನೀಡಿದ್ದು, 'ಫುಟ್ಬಾಲ್ ಆಟಗಾರ'ನ ಚಿಹ್ನೆಯನ್ನು ನೀಡಿದೆ.
ಹಾಗೆಯೇ, ರುತಬ್ರತಾ ಬ್ಯಾನರ್ಜಿ ಬಣಕ್ಕೆ 'ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್' ಎಂಬ ಹೆಸರು ಮತ್ತು 'ಲಕೋಟೆ' ಚಿಹ್ನೆಯನ್ನು ಹಂಚಿಕೆ ಮಾಡಿದೆ.
ಪಶ್ಚಿಮ ಬಂಗಾಳದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 6ರಂದು ಉಪಚುನಾವಣೆ ನಿಗದಿಯಾಗಿದೆ. ವಿವಾದದ ಭಾಗವಾಗಿರುವ ಎರಡೂ ಬಣಗಳು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಹೆಸರು ಮತ್ತು ಚಿಹ್ನೆಯನ್ನು ಬಳಕೆ ಮಾಡದಂತೆ ನಿರ್ಬಂಧಿಸಿ ಆಯೋಗವು ಗುರುವಾರ ರಾತ್ರಿ ಆದೇಶ ಹೊರಡಿಸಿತ್ತು.
ಅದರಂತೆ, ಮತಪತ್ರದಿಂದ ಎಐಟಿಸಿಯ ಹೆಸರು ಹಾಗೂ ಅದರ 'ಹೂ ಮತ್ತು ಹುಲ್ಲು' ಚಿಹ್ನೆಯನ್ನು ಆಯೋಗವು ತೆಗೆದುಹಾಕಿದೆ.
ಶುಕ್ರವಾರ ಬೆಳಿಗ್ಗೆ 11ರ ವೇಳೆಗೆ ತಮಗೆ ಬೇಕಾದ ಹೆಸರು, ಚಿಹ್ನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ತಾವು ಸೂಚಿಸುವ ಹೆಸರು ಎಐಟಿಸಿಯನ್ನು ಹೋಲುವಂತಿರಬೇಕು. ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಲಭ್ಯವಿರುವ ಮುಕ್ತ ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿತ್ತು.
ಸೋಲಿನ ಬಳಿಕ ಒಡಕು
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭಾರಿ ಮುಖಭಂಗ ಅನುಭವಿಸಿತ್ತು. 294 ಸದಸ್ಯ ಬಲದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 208 ಸ್ಥಾನಗಳಲ್ಲಿ ಜಯಿಸಿತ್ತು. ಟಿಎಂಸಿಗೆ 80 ಕಡೆ ಮಾತ್ರವೇ ಗೆಲುವು ದಕ್ಕಿತ್ತು. ಅದಾದ ನಂತರ, ಪಕ್ಷದಲ್ಲಿ ಒಡಕು ಮೂಡಿತ್ತು.
ಸುಮಾರು 58 ಬಂಡಾಯ ಶಾಸಕರು ರುತಬ್ರತಾ ಬ್ಯಾನರ್ಜಿ ಅವರನ್ನು ತಮ್ಮ ನಾಯಕ ಎಂದು ಘೋಷಿಸಿ, ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಇದಕ್ಕೆ ವಿಧಾನಸಭಾ ಸ್ಪೀಕರ್ ಅವರಿಂದ ಮಾನ್ಯತೆಯನ್ನೂ ಪಡೆದಿದ್ದರು.
ಬಂಡಾಯದ ಬಿಸಿ ವಿಧಾನಸಭೆ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ, ಸಂಸತ್ತಿನವರೆಗೂ ತಲುಪಿತು. ಟಿಎಂಸಿಯಿಂದ ಲೋಕಸಭೆಗೆ ಚುನಾಯಿತರಾಗಿರುವ 20 ಸಂಸದರು, ಪಕ್ಷವನ್ನು ತ್ರಿಪುರಾದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಜೊತೆ ವಿಲೀನಗೊಳಿಸುವುದಾಗಿ ಘೋಷಿಸಿದ್ದರು. ಸದನದಲ್ಲಿ ಪ್ರತ್ಯೇಕ ಮಾನ್ಯತೆ ನೀಡಬೇಕು ಎಂದೂ ಮನವಿ ಮಾಡಿದ್ದರು. ಇದು, ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ.

