ನವದೆಹಲಿ: ಡಿಜಿಟಲ್ ಅರೆಸ್ಟ್ ಹಗರಣಗಳ ವಿರುದ್ಧ ಸಿಬಿಐ ದೇಶಾದ್ಯಂತ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದು, 'ಆಪರೇಷನ್ ಚಕ್ರ-II' ಅಡಿಯಲ್ಲಿ 20 ರಾಜ್ಯಗಳ 89 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿಗಳನ್ನು ನಡೆಸಿದೆ. ಸಂತ್ರಸ್ತರಿಂದ ಲಪಟಾಯಿಸಿದ್ದ ಹಣವನ್ನು ಸ್ವೀಕರಿಸಿ, ಬೇರೆಡೆಗೆ ವರ್ಗಾಯಿಸುತ್ತಿದ್ದ ಮೂವರನ್ನು ಸಹ ಸಿಬಿಐ ಬಂಧಿಸಿದೆ.
ಪೊಲೀಸರು ಮತ್ತು ಇತರ ಸರಕಾರಿ ಅಧಿಕಾರಿಗಳ ಸೋಗಿನಲ್ಲಿ ಬಲಿಪಶುಗಳನ್ನು ಡಿಜಿಟಲ್ ಬಂಧನಕ್ಕೊಳಪಡಿಸಿ, ಅವರಿಗೆ ಬೆದರಿಕೆಯನ್ನೊಡ್ಡಿ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಿಕೊಳ್ಳುವ ಸೈಬರ್ ಅಪರಾಧಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಸಿಬಿಐ ಈ ಕ್ರಮವನ್ನು ಕೈಗೊಂಡಿದೆ.
ಇಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಮತ್ತು ಅದಕ್ಕೆ ನೆರವಾಗುವ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ತನಗೆ ನಿರ್ದೇಶನ ನೀಡಿದೆ ಎಂದು ಸಿಬಿಐ ಹೇಳಿದೆ.
ಸಿಬಿಐ ವಿವಿಧ ರಾಜ್ಯಗಳಿಂದ ಹಲವಾರು ಡಿಜಿಟಲ್ ಬಂಧನ ಸಂಬಂಧಿತ ಪ್ರಕರಣಗಳನ್ನು ವಹಿಸಿಕೊಂಡಿದೆ. ಇತ್ತೀಚಿನ ಕಾರ್ಯಾಚರಣೆಯಲ್ಲಿ ಸಿಬಿಐ ಕೈಗೆತ್ತಿಕೊಂಡಿರುವ ಮೂರು ಪ್ರಮುಖ ಪ್ರಕರಣಗಳಲ್ಲಿ ಬಲಿಪಶುಗಳನ್ನು ಒಂದರಿಂದ ಮೂರು ತಿಂಗಳವರೆಗೆ ಡಿಜಿಟಲ್ ಬಂಧನದಲ್ಲಿರಿಸಿ ಒಟ್ಟು 42.36 ಕೋಟಿ ರೂಪಾಯಿಗಳನ್ನು ವಂಚಿಸಲಾಗಿತ್ತು.
ಮೊದಲ ಪ್ರಕರಣ ಬಿಟ್ಸ್ ಪಿಲಾನಿಗೆ ಸಂಬಂಧಿಸಿದ್ದು, ವ್ಯಕ್ತಿಯೊಬ್ಬರನ್ನು 3 ತಿಂಗಳು ಡಿಜಿಟಲ್ ಅರೆಸ್ಟ್‌ನಲ್ಲಿಟ್ಟು 7.67 ಕೋಟಿ ರೂ.ವಂಚಿಸಲಾಗಿತ್ತು. ಗುಜರಾತ್‌ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ 19.24 ಕೋಟಿ ರೂ. ಮತ್ತು ಕರ್ನಾಟಕದಲ್ಲಿಯ ಮೂರನೇ ಪ್ರಕರಣದಲ್ಲಿ 15.45 ಕೋಟಿ ರೂ.ಗಳನ್ನು ವಂಚಿಸಲಾಗಿತ್ತು.
ವಂಚನೆಯ ಹಣದ ಹರಿವನ್ನು ಪತ್ತೆಹಚ್ಚಲು, ವಂಚಕ ಜಾಲದ ಪ್ರಮುಖರನ್ನು ಗುರುತಿಸಲು ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವುದನ್ನು ತಡೆಯಲು ಸಿಬಿಐ 20 ರಾಜ್ಯಗಳ 89 ಕಡೆಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.
ಶೋಧಗಳ ಸಂದರ್ಭದಲ್ಲಿ ಸಿಬಿಐ ತಂಡಗಳು ಬ್ಯಾಂಕ್ ಮತ್ತು ಖಾತೆ ಸಂಬಂಧಿತ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ಇತರ ನಿರ್ಣಾಯಕ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿವೆ.
ಈ ಕಾರ್ಯಾಚರಣೆಯಲ್ಲಿ ಹರ್ಯಾಣದ ಆಕಾಶ್, ಕೋಲ್ಕತಾದ ರಾಜಾ ಕರ್ಮಾಕರ್ ಮತ್ತು ಜ್ಯೋತಿ ರಾಣಿ ಎನ್ನುವವರನ್ನು ಬಂಧಿಸಲಾಗಿದೆ. ಇವರು ವಂಚನೆಯ ಹಣವನ್ನು ಸ್ವೀಕರಿಸಿ, ಬೇರೆ ಖಾತೆಗಳಿಗೆ ವರ್ಗಾಯಿಸುವ ಮತ್ತು ನಗದು ರೂಪದಲ್ಲಿ ಹಿಂಪಡೆಯುವ ಮೂಲಕ ಹಣದ ಜಾಡನ್ನು ಮರೆಮಾಚುವ ಕೆಲಸ ಮಾಡುತ್ತಿದ್ದರು.
ಸಿಬಿಐ ಈ ಪ್ರಕರಣಗಳ ತನಿಖೆಯನ್ನು ಮುಂದುವರೆಸಿದ್ದು, ವಶಪಡಿಸಿಕೊಂಡಿರುವ ಬ್ಯಾಂಕಿಂಗ್ ಮತ್ತು ಡಿಜಿಟಲ್ ದಾಖಲೆಗಳನ್ನು ವಿಶ್ಲೇಷಿಸುವ ಮೂಲಕ ಈ ವಂಚನೆಯ ಜಾಲದ ಹಿಂದೆ ಇರುವ ಇತರರನ್ನು ಬಂಧಿಸಲು ಶ್ರಮಿಸುತ್ತಿದೆ.

