ತಿರುವನಂತಪುರಂ: ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೇಲಿನ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ₹20 ಕೋಟಿ ಅಕ್ರಮ ವಹಿವಾಟು ನಡೆದಿರುವ ಕುರಿತು ದಾಖಲೆಗಳನ್ನು ಪತ್ತೆ ಮಾಡಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಪಿಣರಾಯಿ ವಿಜಯನ್, ಅವರ ಮಗಳು ವೀಣಾ.ಟಿ ಹಾಗೂ ಆಕೆಯ ಪತಿ ರಿಯಾಸ್ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸುವಂತೆ ಕೋರಿ ಪೊಲೀಸರಿಗೆ ಸಲ್ಲಿಸಲಾದ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
ವೀಣಾ ಅವರಿಂದ ವಶಕ್ಕೆ ಪಡೆದ ದಾಖಲೆಗಳಲ್ಲಿ ₹20 ಕೋಟಿ ವಹಿವಾಟು ನಡೆದಿರುವುದಕ್ಕೆ ಖಚಿತವಾದ ದಾಖಲೆಗಳು ಲಭ್ಯವಾಗಿವೆ ಎಂದು ಇ.ಡಿ. ವರದಿಯಲ್ಲಿ ಹೇಳಿದೆ.
ರಿಯಾಸ್ ಅವರು ತನ್ನ ಸಹಚರರ ಮೂಲಕ ವಹಿವಾಟು ನಡೆಸಿರುವುದು ಕೈಬರಹದ ದಾಖಲೆಗಳಲ್ಲಿ ಕಂಡುಬಂದಿದೆ. ಹವಾಲಾ ಮೂಲಕವು ಹಣ ಕಳುಹಿಸಲಾಗಿದೆ ಎಂದು ತಿಳಿಸಿದೆ.
ಕೊಚ್ಚಿ ಮೂಲದ ಮಿನರಲ್ಸ್ ಆಯಂಡ್ ರುಟೈಲ್ ಲಿಮಿಟೆಡ್‌ನಿಂದ ವೀಣಾ ಅವರು ₹3.28 ಕೋಟಿ ಸ್ವೀಕರಿಸಿದ್ದಾರೆ. ವಿಜಯನ್ ಪರವಾಗಿ ಲಂಚದ ಹಣವನ್ನು ಮಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ರಿಯಾಸ್ ಅವರ ಅಕ್ರಮ ವಹಿವಾಟಿನ ಕುರಿತಂತೆ ಆತನ ಸ್ನೇಹಿತ ಹನ್ ವ್ಯಾರಿಸ್ ಹೇಳಿಕೆ ನೀಡಿದ್ದಾರೆ ಎಂದು ಉಲ್ಲೇಖಿಸಿದೆ.
ವಿಜಯನ್ ಹಾಗೂ ಅವರ ಸಹಚರರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸುವ ಕುರಿತು ಕೇರಳಂನ ಕಾಂಗ್ರೆಸ್ ಸರ್ಕಾರವು ಕಾನೂನು ತಂಡದಿಂದ ಅಭಿಪ್ರಾಯ ಕೋರಿದೆ.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯನ್ ಅವರ ಅಳಿಯ ಹಾಗೂ ಮಾಜಿ ಮಂತ್ರಿ ಮೊಹಮ್ಮದ್ ರಿಯಾಸ್, 'ನನ್ನ ವಿರುದ್ಧ ಹೇಳಿಕೆ ನೀಡುವಂತೆ ಸ್ನೇಹಿತರ ಮೇಲೆ ಒತ್ತಡ ಹೇರಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.

