ನವದೆಹಲಿ: ನೇಪಾಳ ಪ್ರವಾಹದಲ್ಲಿ ಕಾಣೆಯಾಗಿದ್ದ 166 ಭಾರತೀಯರನ್ನು ರಕ್ಷಿಸಲಾಗಿದೆ. ಇನ್ನೂ 275 ಜನರು ಇದುವರೆಗೂ ಪತ್ತೆಯಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಶುಕ್ರವಾರ ತಿಳಿಸಿದೆ.
ಈ ಕುರಿತು ಮಾತನಾಡಿರುವ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, 'ನಾವು ನೇಪಾಳ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಕಾಣೆಯಾದವರನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ' ಎಂದು ಹೇಳಿದ್ದಾರೆ.
ನೇಪಾಳದಲ್ಲಿ ಆ.26ರಂದು ಪ್ರವಾಹ ಸಂಭವಿಸಿದ ನಂತರ, ಭಾರತವು ಏಳು ವಿಮಾನಗಳ ಮೂಲಕ ಸುಮಾರು 95 ಟನ್ ಪರಿಹಾರ ಸಾಮಗ್ರಿಯನ್ನು ಅಲ್ಲಿಗೆ ರಫ್ತು ಮಾಡಿದೆ. 30 ಸುರಂಗ ರಕ್ಷಣಾ ತಜ್ಞರು, 19 ವಿಧಿವಿಜ್ಞಾನ ಪರಿಣಿತರು ಮತ್ತು ಐವರು ಸದಸ್ಯರ ವೈದ್ಯಕೀಯ ತಂಡ ಸೇರಿದಂತೆ 54 ಜನರನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲಿನ ಸರ್ಕಾರದ ಕೋರಿಕೆಯಂತೆ ವಿವಿಧ ಪರಿಹಾರ ಸಾಮಾಗ್ರಿಗಳು ಮತ್ತು ನೆರವು ನೀಡುವುದನ್ನು ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆಯು 1,295ಕ್ಕೆ ಏರಿಕೆಯಾಗಿದೆ. ಇದುವರೆಗೂ 12 ಸಾವಿರ ಜನರನ್ನು ರಕ್ಷಿಸಲಾಗಿದ್ದು, ಇನ್ನೂ 5 ಸಾವಿರ ಮಂದಿ ಕಾಣೆಯಾಗಿದ್ದಾರೆ. ಅವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.

