ಕೋಲ್ಕತ್ತ: ಎಸ್‌ಐಆರ್‌ನಲ್ಲಿ ಏಕಪಕ್ಷೀಯ ತೀರ್ಮಾನ ಕುರಿತಂತೆ ಮುಖ್ಯ ಚುನಾವಣಾ ಆಯುಕ್ತರ ಬಗ್ಗೆ ಚುನಾವಣಾ ಆಯುಕ್ತರು ಆರೋಪ ಮಾಡುತ್ತಿರುವ ನಡುವೆಯೇ ಟಿಎಂಸಿ ಮಮತಾ ಬ್ಯಾನರ್ಜಿ ಬಣದ ಸಂಸದ ಅಭಿಷೇಕ್ ಬ್ಯಾನರ್ಜಿ ಹೊಸ ಬಾಂಬ್ ಸಿಡಿಸಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣಾ ಆಯೋಗದ ವೀಕ್ಷಕರ ವಾಟ್ಸ್‌ಆಯಪ್ ಗ್ರೂಪ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಅವರು, 30 ಲಕ್ಷ ಮತದಾರರ ಹೆಸರನ್ನು ಡಿಲೀಟ್ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ವಿವಾದದ ನಡುವೆಯೂ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
'ಏಪ್ರಿಲ್ ತಿಂಗಳಿನಲ್ಲಿ ಚುನಾವಣಾ ಆಯೋಗದ ವೀಕ್ಷಕರ ವಾಟ್ಸ್‌ಆಯಪ್ ಗುಂಪೊಂದರ ಸ್ಕ್ರೀನ್‌ಶಾಟ್ ಇದಾಗಿದೆ. ಮತದಾರರ ಪಟ್ಟಿಯಿಂದ 30 ಲಕ್ಷ ಹೆಸರನ್ನು ಡಿಲೀಟ್ ಮಾಡುವ ಸಂಚಿನ ಕುರಿತಾದ ಗಂಭೀರ ಪ್ರಶ್ನೆಗಳನ್ನು ಇದು ಎತ್ತಿದೆ. ಯಾವುದೇ ಕಾರಣಕ್ಕೂ ಇದನ್ನು ಕಡೆಗಣಿಸಲಾಗದು'ಎಂದು ಅಭಿಷೇಕ್ ಬ್ಯಾನರ್ಜಿ 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದ್ಧರೆ.
ದೇಶದ ಜನರ ಗಂಭೀರ ಪ್ರಶ್ನೆಗಳಿಗೆ ಜ್ಞಾನೇಶ್ ಕುಮಾರ್ ಉತ್ತರಿಸಬೇಕಿದೆ ಎಂದು ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
'ಭಾರತ ಗಮನಿಸುತ್ತಿದೆ. ಭಾರತ ಪ್ರಶ್ನೆ ಕೇಳುತ್ತಿದೆ. ಭಾರತವು ಉತ್ತರಕ್ಕಾಗಿ ಆಗ್ರಹಿಸುತ್ತಿದೆ'ಎಂದು ಅವರು ಹೇಳಿದ್ದಾರೆ.
ಅಭಿಷೇಕ್ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ನಲ್ಲಿ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಸೂಚನೆ ಬಂದಿದ್ದು, ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ ಎಂದು ವೀಕ್ಷಕರೊಬ್ಬರು ವಿವರಿಸಿದ್ದಾರೆ.
ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನಡುವೆ ಭಿನ್ನಮತವಿದೆ ಎಂದು ಇಂಗ್ಲಿಷ್ ದೈನಿಕ ವರದಿ ಬೆನ್ನಲ್ಲೇ ಅಭಿಷೇಕ್ ಈ ಆರೋಪ ಮಾಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರು(ಸಿಇಸಿ) ಏಕಪಕ್ಷೀಯವಾಗಿ ಕೈಗೊಂಡ ಹಲವು ನಿರ್ಧಾರಗಳು ಮತ್ತು ಆದೇಶಗಳ ಕುರಿತಂತೆ ಚುನಾವಣಾ ಆಯುಕ್ತರಾದ(ಇಸಿ) ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

