ನವದೆಹಲಿ: ಟಿಎಂಸಿ ಮಮತಾ ಬಣದ ಸಂಸದೆ ಮಹುವಾ ಮೊಯಿತ್ರಾ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗುರುವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ.
'ಇಬ್ಬರು ಚುನಾವಣಾ ಆಯುಕ್ತರ(ಇಸಿ) ವಿರೋಧದ ಹೊರತಾಗಿಯೂ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಮುಖ್ಯ ಚುನಾವಣಾ ಆಯುಕ್ತರು(ಸಿಇಸಿ), ಈ ಎಲ್ಲ ನಿರ್ಧಾರಗಳನ್ನು ಚುನಾವಣಾ ಆಯೋಗದ್ದೇ ಎಂದು ಬಿಂಬಿಸುವ ಮೂಲಕ ವಂಚನೆ ಎಸಗಿದ್ದಾರೆ' ಎಂದು 44 ಪುಟಗಳ ದೂರಿನಲ್ಲಿ ಆರೋಪಿಸಲಾಗಿದೆ.
'ಮುಖ್ಯ ಚುನಾವಣಾ ಆಯುಕ್ತರು ಅಥವಾ ಚುನಾವಣಾ ಆಯುಕ್ತರ ವಿರುದ್ಧ ನ್ಯಾಯಾಲಯದಲ್ಲಿ ಕ್ರಮ ಕೈಗೊಳ್ಳುವುದಕ್ಕೆ ನಿರ್ಬಂಧವಿದೆಯೇ ಹೊರತು, ಎಫ್‌ಐಆರ್ ದಾಖಲಿಸಲು ಯಾವುದೇ ಅಭ್ಯಂತರವಿಲ್ಲ' ಮೊಯಿತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ತಮ್ಮ ಇಬ್ಬರು ಸಹೋದ್ಯೋಗಿಗಳ ಅಭಿಪ್ರಾಯಗಳಿಗೆ ವಿರುದ್ಧವಾಗಿ ಆಯೋಗದ ಪರವಾಗಿ ಕಾರ್ಯನಿರ್ವಹಿಸಲು ಮುಖ್ಯ ಚುನಾವಣಾ ಆಯುಕ್ತರಿಗೆ ಅಧಿಕಾರವಿಲ್ಲ. ಆಯೋಗ ಸರ್ವಾನುಮತದಿಂದ ಅನುಮೋದಿಸದ ವಿಷಯಗಳನ್ನು ಅದರ ಹೆಸರಿನಲ್ಲಿ ಹೊರಡಿಸುವ ಹಕ್ಕೂ ಅವರಿಗಿಲ್ಲ' ಎಂದು ಹೇಳಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ಹೊರಡಿಸಿದ ನಿರ್ಧಾರಗಳು ಮತ್ತು ಆದೇಶಗಳಿಗೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಇಂಗ್ಲಿಷ್ ದೈನಿಕ ವರದಿ ಪ್ರಕಟಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

