ನವದೆಹಲಿ (PTI): ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಆಗಸ್ಟ್ ತಿಂಗಳವರೆಗೆ ಭಾರತದಿಂದ ಬ್ರಿಕ್ಸ್ ರಾಷ್ಟ್ರಗಳಿಗೆ ₹1.90 ಲಕ್ಷ ಕೋಟಿಯಷ್ಟು ಮೌಲ್ಯದ ಸರಕು ಮತ್ತು ಸೇವೆಗಳು ರಫ್ತಾಗಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
ಬ್ರಿಕ್ಸ್ ದೇಶಗಳಿಗೆ ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹1.42 ಲಕ್ಷ ಕೋಟಿ ಮೌಲ್ಯದ ರಫ್ತು ಆಗಿತ್ತು
ಇದಕ್ಕೆ ಹೋಲಿಸಿದರೆ ಈ ಬಾರಿ ರಫ್ತು ಪ್ರಮಾಣ ಶೇ 34ಷ್ಟು ಹೆಚ್ಚಳವಾಗಿದೆ. ಇದು ಬ್ರಿಕ್ಸ್ ದೇಶಗಳಿಗೆ ಭಾರತದಿಂದ ರಫ್ತು ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.
ಒಟ್ಟು ರಫ್ತು ಪೈಕಿ ಶೇ 39ರಷ್ಟು ಚೀನಾಕ್ಕೆ ಆಗಿದೆ. ಹಣಕಾಸಿನ ಮೌಲ್ಯದಲ್ಲಿ ಇದು ₹92 ಸಾವಿರ ಕೋಟಿಯಷ್ಟಾಗಿದೆ ಎಂದು ತಿಳಿಸಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಬ್ರಿಕ್ಸ್ ಒಕ್ಕೂಟದ ಪ್ರಮುಖ ರಾಷ್ಟ್ರಗಳಾಗಿವೆ.
ದಕ್ಷಿಣ ಆಫ್ರಿಕಾಕ್ಕೆ ಶೇ 58, ಬ್ರೆಜಿಲ್‌ಗೆ ಶೇ 13 ಮತ್ತು ರಷ್ಯಾಕ್ಕೆ ದೇಶದಿಂದ ರಫ್ತಾದ ಪ್ರಮಾಣ ಶೇ 11ರಷ್ಟಿದೆ.
ಭಾರತವು ಬ್ರಿಕ್ಸ್ ರಾಷ್ಟ್ರಗಳಿಗೆ ಮಾತ್ರವಲ್ಲದೆ, ಅತಿದೊಡ್ಡ ಆರ್ಥಿಕತೆಯ ರಾಷ್ಟ್ರಗಳಿಗೂ ತನ್ನ ವಹಿವಾಟನ್ನು ವಿಸ್ತರಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಐದು ತಿಂಗಳಿನಲ್ಲಿ ಜಪಾನ್‌ಗೆ ದೇಶದಿಂದ ₹32,905 ಕೋಟಿಯಷ್ಟು ಸರಕು ಮತ್ತು ಸೇವೆಗಳು ರಫ್ತಾಗಿವೆ. ಇದು 2025-26ರ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 43ರಷ್ಟು ಹೆಚ್ಚಳ. ಇಂಧನ, ಎಲೆ ಕ್ಟ್ರಾನಿಕ್ಸ್ ಉತ್ಪನ್ನಗಳು, ಇತರೆ ಸರಕುಗಳ ರಫ್ತು ಹೆಚ್ಚಳವಾಗಿದೆ. ಇದು ಒಟ್ಟಾರೆ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.
ಇಟಲಿಗೆ ₹37,606 ಕೋಟಿ ಮತ್ತು ದಕ್ಷಿಣ ಕೊರಿಯಾಕ್ಕೆ ₹30,795 ಕೋಟಿಯಷ್ಟು ರಫ್ತಾಗಿದ್ದು, ಕ್ರಮವಾಗಿ ಶೇ 30 ಮತ್ತು ಶೇ 22ರಷ್ಟು ಏರಿಕೆಯಾಗಿದೆ.
ದಕ್ಷಿಣ ಕೊರಿಯಾದ ತಯಾರಿಕಾ ವಲಯಕ್ಕೆ ದೇಶದಿಂದ ಕೈಗಾರಿಕಾ ಕಚ್ಚಾ ವಸ್ತುಗಳು, ಇಂಧನ ಉತ್ಪನ್ನಗಳು, ಖನಿಜಗಳು, ಎಲೆಕ್ಟ್ರಾನಿಕ್ಸ್, ಅಲ್ಯುಮಿನಿಯಂ, ಕಬ್ಬಿಣ, ಉಕ್ಕು, ರಾಸಾಯನಿಕ ವಸ್ತುಗಳು ಸೇರಿದಂತೆ ಇತರೆ ಉತ್ಪನ್ನಗಳು ಪೂರೈಕೆ ಆಗುತ್ತಿವೆ ಎಂದು ತಿಳಿಸಿದೆ.

