ಬಾಂಬೆ: ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಸೇರಿಸಿರುವ ಪ್ರಾಧ್ಯಾಪಕ ಸೂರ್ಯನಾರಾಯಣ ಡೂಲ್ಲಾ ಅವರಿಗೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯ ಫ್ಯಾಕಲ್ಟಿ ಫೋರಂ ಬೆಂಬಲ ನೀಡಿದೆ.
ಸೆಪ್ಟೆಂಬರ್ 20ರಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಐಐಟಿ ಬಾಂಬೆ ಫ್ಯಾಕಲ್ಟಿ ಫೋರಂ, 'ಪ್ರಾಧ್ಯಾಪಕರಾದ ಡೂಲ್ಲಾ ಅವರು ಸಂಸ್ಥೆಯ ಶೈಕ್ಷಣಿಕ ನೀತಿಗಳಿಗೆ ಅನುಗುಣವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ' ಎಂದು ತಿಳಿಸಿದೆ.
ಪರೀಕ್ಷೆಯ ವೇಳೆ ಶೈಕ್ಷಣಿಕ ನಿಯಮ ಉಲ್ಲಂಘನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೂಡಲೆ ಡೂಲ್ಲಾ ಅವರು ಸಂಸ್ಥೆ ಕೈಗೊಳ್ಳಬಹುದಾದ ಕ್ರಮವನ್ನು ಅನುಸರಿಸಿದ್ದಾರೆ. ಆದಾಗ್ಯೂ ಅವರ ಘನತೆಗೆ ಕಳಂಕ ಉಂಟಾಗಿರುವುದು ನೋವು ತಂದಿದೆ ಎಂದು ಫ್ಯಾಕಲ್ಟಿ ಫೋರಂ ಹೇಳಿದೆ.
ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಹಾಗೂ ಸಾಹಿಲ್ ಅವರ ಕುಟುಂಬವು ಜಾತಿ ಆಧಾರಿತ ಕಿರುಕುಳದ ಆರೋಪ ಮಾಡಿರುವ ಸಂದರ್ಭದಲ್ಲಿ ಫೋರಂ ಈ ಹೇಳಿಕೆ ನೀಡಿದೆ. ಪ್ರಕರಣದ ತನಿಖೆಯನ್ನು ಮುಂಬೈ ಅಪರಾಧ ವಿಭಾಗ ನಡೆಸುತ್ತಿದೆ.
ಪರೀಕ್ಷೆಯಲ್ಲಿ ಮೊಬೈಲ್ ಬಳಕೆ
'ಐಐಟಿ ಬಾಂಬೆಯ ಇಂಧನ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಬೋಧಕರಾಗಿರುವ ಡೂಲ್ಲಾ ಅವರು ಮಧ್ಯಂತರ ಸೆಮಿಸ್ಟರ್ ಪರೀಕ್ಷೆಯ ಮೇಲ್ವಿಚಾರಣೆ ನಡೆಸುತ್ತಿದ್ದರು. ಆಗ ವಿದ್ಯಾರ್ಥಿಯೊಬ್ಬರು ಸ್ಮಾರ್ಟ್‌ಫೋನ್ ಬಳಸುತ್ತಿರುವುದನ್ನು ಡೂಲ್ಲಾ ಗಮನಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಡೂಲ್ಲಾ ಅವರು ಸಂಸ್ಥೆಯ ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ' ಎಂದು ಫೋರಂ ತಿಳಿಸಿದೆ.
ಪ್ರಾಧ್ಯಾಪಕರ ವಿರುದ್ಧ ಎಫ್‌ಐಆರ್
ಸಾಹಿಲ್ ವಾಕೋಡ್ ಅವರ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಸೆಪ್ಟೆಂಬರ್ 19ರಂದು ಪೊವಾಯಿ ಪೊಲೀಸರು ಪ್ರಾಧ್ಯಾಪಕ ಡೂಲ್ಲಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆದರೆ, ಪ್ರಾಧ್ಯಾಪಕರು ಸಂಸ್ಥೆಯ ಸೆನೆಟ್ ಅನುಮೋದಿತ ಶೈಕ್ಷಣಿಕ ನೀತಿಗಳನ್ನು ಪಾಲಿಸಿ ಕರ್ತವ್ಯ ನಿರ್ವಹಿಸಿದ್ದಾರೆ ಎಂಬುದು ಫ್ಯಾಕಲ್ಟಿ ಫೋರಂನ ನಿಲುವಾಗಿದೆ.

