ಮಂಜೇಶ್ವರ: ಕುಂಜತ್ತೂರು ಸನಿಹದ ತೂಮಿನಾಡು ನಿವಾಸಿ ಸತೀಶ್ ಎಂಬವರ ಮನೆ ಬೀಗ ಒಡೆದು ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ 3ಸಾವಿರ ರೂ. ನಗದು ದೋಚಲಾಗಿದೆ. ಓಣಂ ಹಬ್ಬದ ಹಿನ್ನೆಲೆಯಲ್ಲಿ ಸತೀಶ್ ಅವರ ಕುಟುಂಬ ಕಳೆದ ಬುಧವಾರ ಸಂಬಂಧಿಕರ ಮನೆಗೆ ತೆರಳಿದ್ದು, ಸೋಮವಾರ ಬೆಳಿಗ್ಗೆ ಮನೆಗೆ ವಾಪಸಾದಾಗ ಎದುರು ಭಾಗದ ಬಾಗಿಲಿನ ಬೀಗ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಒಳಗೆ ತೆರಳಿ ನೋಡಿದಾಗ ಮೂರು ಕೊಠಡಿಗಳಲ್ಲಿರುವ ಕಪಾಟುಗಳ ಬೀಗ ಮುರಿದು ಬಟ್ಟೆ ಚೆಲ್ಲಾಪಿಲ್ಲಿಗೊಳಿಸಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಮಂಜೇಶ್ವರ ಠಾಣೆ ಸಿಐ ಎಂ.ವಿ. ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ತಪಾಸಣೆ ನಡೆಸಿದೆ.


